ಪರ್ತ್: ಯುವ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ(Nitish Kumar Reddy) ಪರ್ತ್‌ನಲ್ಲಿ(Perth Test) ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ(IND vs AUS) ಭಾರತ ಪರ ಟೆಸ್ಟ್ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ವೇಗದ ಬೌಲಿಂಗ್ ಆಲ್‌ರೌಂಡರ್ ತಂಡದಲ್ಲಿ ಇಲ್ಲದ ಕಾರಣ 21 ವರ್ಷದ ನಿತೀಶ್ ಭಾರತಕ್ಕೆ ನೆರವಾಗುವ ನಿರೀಕ್ಷೆ ಇದೆ.
ನಿತೀಶ್ ಇದುವರೆಗೆ ಆಂಧ್ರ ಪರ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಜತೆಗೆ 56 ವಿಕೆಟ್ ಕಬಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದಿದ್ದ ತವರಿನ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಮೂರು ಪಂದ್ಯಗಳನ್ನಾಡಿ 90 ರನ್ ಮತ್ತು 3 ವಿಕೆಟ್ ಕಿತ್ತಿದ್ದರು. 1 ಅರ್ಧಶತಕ ಕೂಡ ಬಾರಿಸಿದ್ದರು.
ಇದನ್ನೂ ಓದಿ Kapil Dev: ಪಾಕಿಸ್ತಾನ ಪ್ರಯಾಣದ ಬಗ್ಗೆ ಕಪಿಲ್ ಮಹತ್ವದ ಹೇಳಿಕೆ
ಆಸೀಸ್ ಪ್ರವಾಸಕ್ಕೆ ಗಂಭೀರ್ ಆಯ್ಕೆ ಆದ್ಯತೆಯ ಆಧಾರದಲ್ಲೇ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ವೇಗಿ ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿದೆ. ನಿತೀಶ್ ಕುಮಾರ್ರನ್ನು ಹಾರ್ದಿಕ್ ಪಾಂಡ್ಯ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದ್ದರೂ, ಆಸೀಸ್ನಲ್ಲಿ ಭಾರತ ಎ ತಂಡದ ಪರ ಆಡುವಾಗ ಶಾರ್ಟ್ಬಾಲ್ ಎದುರು ಅವರ ದೌರ್ಬಲ್ಯ ಬೆಳಕಿಗೆ ಬಂದಿತ್ತು. ಆದರೂ ಕೂಡ ಅವರು ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆ ಕಂಡುಬಂದಿದೆ.
ಹೆಬ್ಬೆರಳು ಗಾಯದ ಕಾರಣ ಗಿಲ್ ಮೊದಲ ಪಂದ್ಯವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತ. ಹೀಗಾಗಿ ರಾಹುಲ್ ಅವರು ಪರ್ತ್‌ನಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಉಪನಾಯಕ ಜಸ್ಪ್ರೀತ್ ಬುಮ್ರಾ ತಂಡದ ನೇತೃತ್ವ ವಹಿಸಿದ್ದಾರೆ. ಶುಕ್ರವಾರ WACA ಮೈದಾನದಲ್ಲಿ ನಡೆದ ತಂಡದೊಳಗಿನ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ವೇಗಿ ಪ್ರಸಿದ್ಧ್ ಕೃಷ್ಣ ಅವರು ಎಸೆದ ಚೆಂಡು ಮೊಣಕೈಗೆ ತಗುಲಿ ಏಟಾದ ಹಿನ್ನೆಲೆಯಲ್ಲಿ ರಾಹುಲ್ ವೈದ್ಯಕೀಯ ಚಿಕಿತ್ಸೆಗಾಗಿ ಮೈದಾನದಿಂದ ನಿರ್ಗಮಿಸಿದ್ದರು. ಭಾನುವಾರ ಮತ್ತೆ ಮೈದಾನಕ್ಕಿಳಿದಿದ್ದ ರಾಹುಲ್ ಯಾವುದೇ ಚಿಂತೆಯಿಲ್ಲದೆ ದೀರ್ಘ ಕಾಲ ಬ್ಯಾಟಿಂಗ್ ನಡೆಸಿದ್ದರು. ರಾಹುಲ್ ಬ್ಯಾಟಿಂಗ್ ನಡೆಸಿದ ವಿಡಿಯೊವನ್ನು ಬಿಸಿಸಿಐ ಕೂಡ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.
ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ,ಅಭಿಮನ್ಯು ಈಶ್ವರನ್/ದೇವದತ್ ಪಡಿಕ್ಕಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.