Friday, 22nd November 2024

IND vs AUS: ಭಾರತ ತಂಡಕ್ಕೆ ನಿತೀಶ್‌ ರೆಡ್ಡಿ, ಹರ್ಷಿತ್ ರಾಣಾ ಪದಾರ್ಪಣೆ; ಸುಂದರ್‌ ಏಕೈಕ ಸ್ಪಿನ್ನರ್‌

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ(IND vs AUS) ಇಂದು(ಶುಕ್ರವಾರ) ಪರ್ತ್‌ನಲ್ಲಿ(Perth) ಆರಂಭಗೊಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿದೆ.‌ ನಿರೀಕ್ಷೆಯಂತೆ ಭಾರತ ಪರ ನಿತೀಶ್‌ ಕುಮಾರ್ ರೆಡ್ಡಿ(Nitish Reddy) ಮತ್ತು ಹರ್ಷಿತ್ ರಾಣಾ(Harshit Rana) ಪದಾರ್ಪಣೆ ಮಾಡಿದರು. ಆಸೀಸ್‌ ಪರ ನಾಥನ್ ಮೆಕ್‌ಸ್ವೀನಿ ಚೊಚ್ಚಲ ಟೆಸ್ಟ್‌ ಕ್ಯಾಪ್‌ ಪಡೆದರು.

ಸದ್ಯ ಬ್ಯಾಟಿಂಗ್‌ ನಡೆಸುತ್ತಿರುವ ಭಾರತ ಯಶಸ್ವಿ ಜೈಸ್ವಾಲ್‌(0) ಮತ್ತು ದೇವದತ್ತ ಪಡಿಕ್ಕಲ್‌(0) ಅವರ ವಿಕೆಟ್‌ ಕಳೆದುಕೊಂಡಿದೆ. ಕೆ.ಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಶುಭಮನ್‌ ಗಿಲ್‌ ಗಾಯಗೊಂಡು ಅಲಭ್ಯರಾದ ಕಾರಣ ಅವರ ಬದಲಿಗೆ ಪಡಿಕ್ಕಲ್‌ ತಂಡದಲ್ಲಿ ಸ್ಥಾನ ಪಡೆದರು. ಇದು ಆಸ್ಟ್ರೇಲಿಯಾ ನೆಲದಲ್ಲಿ ಅವರಿಗೆ ಮೊದಲ ಪಂದ್ಯ. ಅಚ್ಚರಿ ಎಂದರೆ ಅನುಭವಿ ಸ್ಪಿನ್ನರ್‌ಗಳಾದ ಆರ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಅವರನ್ನು ಹೊರಗಿರಿಸಿ ವಾಷಿಂಗ್ಟನ್‌ ಸುಂದರ್‌ಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಲಾಗಿದೆ.

ಕೆ.ಎಲ್‌ ರಾಹುಲ್‌ ಅವರು ಆರಂಭಿನಾಗಿ ಆಡಿದ ಕಾರಣ 6ನೇ ಕ್ರಮಾಂಕ್ಕೆ ಸೂಕ್ತ ಬ್ಯಾಟರ್‌ ಆಗಿ ಧೃವ್‌ ಜುರೆಲ್‌ ಅವಕಾಶ ಪಡೆದರು. ವಿಕೆಟ್‌ ಕೀಪರ್‌ ಆಗಿರುವ ಜುರೆಲ್‌ ತಜ್ಞ ಬ್ಯಾಟರ್‌ ಕೂಡ ಆಗಿದ್ದಾರೆ.  ಆಸ್ಟ್ರೇಲಿಯಾದಲ್ಲೇ ನಡೆದಿದ್ದ ಆಸ್ಟ್ರೇಲಿಯಾ ‘ಎ’ ವಿರುದ್ಧ ನಡೆದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ನಿರೀಕ್ಷತ ಬ್ಯಾಟಿಂಗ್‌ ಪ್ರರ್ದರ್ಶನ ತೋರಿದ್ದರು. ಎರಡೂ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ಬಾರಿಸಿ ಮಿಂಚಿದ್ದರು. ಅವರ ಬ್ಯಾಟಿಂಗ್‌ ಕೌಶಲ್ಯಗಳ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಕೂಡ ತೃಪ್ತಿ ವ್ಯಕ್ತಪಡಿಸಿತ್ತು. ಇದೀಗ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿದೆ.

ಆಸೀಸ್​ ಪ್ರವಾಸಕ್ಕೆ ಗಂಭೀರ್​ ಆಯ್ಕೆ ಆದ್ಯತೆಯ ಆಧಾರದಲ್ಲೇ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಮತ್ತು ವೇಗಿ ಹರ್ಷಿತ್​ ರಾಣಾಗೆ ಅವಕಾಶ ನೀಡಲಾಗಿತ್ತು. ಇದೀಗ ಉಭಯ ಆಟಗಾರರು ಮೊದಲ ಪಂದ್ಯದಲ್ಲೇ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಿತೀಶ್​ ಕುಮಾರ್‌ಗೆ ವಿರಾಟ್‌ ಕೊಹ್ಲಿ, ಹರ್ಷಿತ್​ ರಾಣಾಗೆ ಆರ್‌ ಅಶ್ವಿನ್‌ ಕ್ಯಾಪ್‌ ನೀಡಿ ಸ್ವಾಗತಿಸಿದರು.

https://twitter.com/OneCricketApp/status/1859788948224270512

ನಿತೀಶ್ ಇದುವರೆಗೆ ಆಂಧ್ರ ಪರ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಜತೆಗೆ 56 ವಿಕೆಟ್​ ಕಬಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದಿದ್ದ ತವರಿನ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಮೂರು ಪಂದ್ಯಗಳನ್ನಾಡಿ 90 ರನ್‌ ಮತ್ತು 3 ವಿಕೆಟ್‌ ಕಿತ್ತಿದ್ದರು. 1 ಅರ್ಧಶತಕ ಕೂಡ ಬಾರಿಸಿದ್ದರು. ಹರ್ಷಿತ್‌ ರಾಣಾ​ ಇದುವರೆಗೆ ದಿಲ್ಲಿ ಪರ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಈ ವೇಳೆ 22 ವಿಕೆಟ್​ ಕಬಳಿಸಿದ್ದಾರೆ. ಐಪಿಎಲ್​ನಲ್ಲಿ ಕೆಕೆಆರ್‌​ ಪರವೂ ಮಿಂಚಿದ್ದರು.