ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯಲ್ಲಿ ಆಡಲು ಎದುರು ನೋಡುತ್ತಿರುವ ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲನೇ ಟೆಸ್ಟ್ ಪಂದ್ಯ ನವೆಂಬರ್ 22 ರಂದು ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಕಳೆದ ಎರಡು ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿರುವ ಟೀಮ್ ಇಂಡಿಯಾ ಇದೀಗ ಹ್ಯಾಟ್ರಿಕ್ ಸಾಧನೆ ಮಾಡಲು ಎದುರು ನೋಡುತ್ತಿದೆ ಹಾಗೂ ಮೂರನೇ ಆವತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಪ್ರವೇಶಿಸುವ ಪ್ರಯತ್ನದಲ್ಲಿದೆ. ಅದೇ ರೀತಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಲಗ್ಗೆ ಇಡಲು ಆಸ್ಟ್ರೇಲಿಯಾ ತಂಡಕ್ಕೂ ಕೂಡ ಈ ಸರಣಿ ಅತ್ಯಂತ ನಿರ್ಣಾಯಕವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ರೇಸ್‌ನಲ್ಲಿ ಭಾರತ ತಂಡಕ್ಕಿಂದ ಆಸ್ಟ್ರೇಲಿಯಾ ತಂಡ ಉತ್ತಮ ಸ್ಥಾನದಲ್ಲಿದೆ. ಭಾರತ ತಂಡ, ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್ ವಾಷ್ ಆಘಾತ ಅನುಭವಿಸಿತ್ತು. ಈ ಸರಣಿಯಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಆದರೆ, ಜಸ್‌ಪ್ರೀತ್ ಬುಮ್ರಾ ಮಾತ್ರ ಅತ್ಯುತ್ತಮವಾಗಿ ಕಂಡಿದ್ದರು.
R Ashwin: ಶೇನ್ ವಾರ್ನ್ ದಾಖಲೆ ಸರಿಗಟ್ಟಿದ ಆರ್.ಅಶ್ವಿನ್
ಪರ್ತ್ ಟೆಸ್ಟ್‌ಗೆ ರೋಹಿತ್-ಗಿಲ್ ಅಲಭ್ಯ
ಅಂದ ಹಾಗೆ ಪರ್ತ್ ಟೆಸ್ಟ್‌ಗೆ ರೋಹಿತ್ ಶರ್ಮಾ ಹಾಗೂ ಗಾಯಾಳು ಶುಭಮನ್ ಗಿಲ್ ಅಲಭ್ಯರಾಗಿದ್ದಾರೆ. ಎರಡನೇ ಮಗುವಿನ ಕಾರಣ ರೋಹಿತ್ ಶರ್ಮಾ ಆರಂಭಿಕ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನಾಯಕ ಜಸ್‌ಪ್ರೀತ್ ಬುಮ್ರಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್, ಗಿಲ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಹಿರಿಯ ಆಟಗಾರರ ಮೇಲೆ ಒತ್ತಡ ಜಾಸ್ತಿಯಾಗಿದೆ.
ಭಾರತ ತಂಡಕ್ಕೆ ಕೀ ಆಟಗಾರರ ಪೈಕಿ ಆರ್ ಅಶ್ವಿನ್ ಕೂಡ ಒಬ್ಬರಾಗಿದ್ದಾರೆ. ಈ ಹಿಂದಿನ ಪ್ರವಾಸದಲ್ಲಿಯೂ ಭಾರತದ ಪರ ಆರ್ ಅಶ್ವಿನ್ ಎರಡನೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದ ಬೌಲರ್ ಎನಿಸಿಕೊಂಡಿದ್ದರು. ಇವರು 2020-21ರ ಸಾಲಿನ ಟೆಸ್ಟ್ ಸರಣಿಯಲ್ಲಿ ಅಶ್ವಿನ್ 12 ವಿಕೆಟ್‌ಗಳನ್ನು ಕಿತ್ತಿದ್ದರು. ಅದೇ ಪ್ರದರ್ಶನವನ್ನು ಮುಂದುವರಿಸಲು ಅಶ್ವಿನ್ ಎದುರು ನೋಡುತ್ತಿದ್ದಾರೆ.
— BCCI (@BCCI) November 13, 2024
ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 200 ವಿಕೆಟ್‌ಗಳ ಸನಿಹದಲ್ಲಿ ಅಶ್ವಿನ್
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಆರ್ ಅಶ್ವಿನ್‌ಗೆ ಕೇವಲ 6 ವಿಕೆಟ್‌ಗಳ ಅಗತ್ಯವಿದೆ. ಸದ್ಯ ಆರ್ ಅಶ್ವಿನ್ ಅವರು 194 ವಿಕೆಟ್‌ಗಳನ್ನು ಹೊಂದಿದ್ದಾರೆ. ಅವರು ಇದೀಗ ಪರ್ತ್ ಟೆಸ್ಟ್‌ನಲ್ಲಿ ಕೇವಲ ಆರು ವಿಕೆಟ್‌ಗಳನ್ನು ಪಡೆದರೆ, ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಲಿರುವ ಆಸ್ಟ್ರೇಲಿಯಾ ಸ್ಪಿನ್ನರ್ ನೇಥನ್ ಲಯಾನ್ ಅವರು 187 ವಿಕೆಟ್‌ಗಳನ್ನು ಪಡೆದಿದ್ದು ಎರಡನೇ ಸ್ಥಾನದಲ್ಲಿದ್ದಾರೆ.