Thursday, 21st November 2024

IND vs AUS: ವಿರಾಟ್‌ ಕೊಹ್ಲಿ ಅಲ್ಲ, ಭಾರತಕ್ಕೆ ಯಶಸ್ವಿ ಜೈಸ್ವಾಲ್‌ ಎಕ್ಸ್‌ ಫ್ಯಾಕ್ಟರ್‌ ಎಂದ ರವಿಶಾಸ್ತ್ರಿ!

Ravi Shastri praised on Yashasvi Jaiswal

ಪರ್ತ್‌: ಅತ್ಯಂತ ತೀವ್ರ ಕುತೂಹಲ ಕೆರಳಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ (IND vs AUS) ನಡುವಣ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನವೆಂಬರ್‌ 22 ರಂದು ಶುಕ್ರವಾರದಂದು ಮೊದಲನೇ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ ಆರಂಭವಾಗಲಿದೆ. ಈ ಬಗ್ಗೆ ಮಾತನಾಡಿದ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ, ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್‌ ಎಕ್ಸ್‌ ಫ್ಯಾಕ್ಟರ್‌ ಆಟಗಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಯಶಸ್ವಿ ಜೈಸ್ವಾಲ್‌ ಸತತ ಎರಡು ದ್ವಿಶತಕಗಳನ್ನು ಸಿಡಿಸಿದ ಘಟನೆಯನ್ನು ಸ್ಮರಿಸಿದ ರವಿ ಶಾಸ್ತ್ರಿ, ಅವರು ಉತ್ತಮ ಫಾರ್ಮ್‌ನಲ್ಲಿದ್ದರೆ ಹಾಗೂ ಅವರು ತಮ್ಮ ಹಾದಿಯಲ್ಲಿ ಸರಿಯಾಗಿ ಆಡುತ್ತಿದ್ದರೆ, ಅವರನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ತಮ್ಮದೇ ಹಾದಿಯಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ರವಿ ಶಾಸ್ತ್ರಿ ಹೇಳಿದ್ದಾರೆ.

IND vs AUS: ಪೂಜಾರ ಇಲ್ಲದಿರುವುದು ಸಂತಸದ ವಿಷಯ; ಹ್ಯಾಜಲ್‌ವುಡ್‌

ಯಶಸ್ವಿ ಜೈಸ್ವಾಲ್‌ ಭಾರತಕ್ಕೆ ಎಕ್ಸ್‌ ಫ್ಯಾಕ್ಟರ್‌: ರವಿ ಶಾಸ್ತ್ರಿ

ಐಸಿಸಿ ರಿವ್ಯೂವ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, “ಯಶಸ್ವಿ ಜೈಸ್ವಾಲ್‌ ಅಗ್ರ ಸ್ಥಾನದಲ್ಲಿದ್ದಾರೆ ಏಕೆಂದರೆ ಅವರು ಒಮ್ಮೆ ಫಾರ್ಮ್‌ ಅನ್ನು ಕಂಡುಕೊಂಡರೆ ವಿನಾಶಕಾರಿಯಾಗಬಹುದು. ಅವರು ಸ್ಪಿನ್‌ಗೆ ಅತ್ಯುತ್ತಮವಾಗಿ ಆಡಬಲ್ಲರು ಹಾಗೂ ತಮ್ಮದೇ ಹಾದಿಯಲ್ಲಿ ಆಡಬಲ್ಲರು ಮತ್ತು ತಮ್ಮ ಬ್ಯಾಟಿಂಗ್‌ನಲ್ಲಿ ಎಲ್ಲಾ ಬಗೆಯ ಶಾಟ್ಸ್‌ ಹೊಂದಿದ್ದಾರೆ. ದೊಡ್ಡ ಮೊತ್ತದ ರನ್‌ಗಳನ್ನು ಹೊಡೆಯಬಲ್ಲ ಅವರ ಸಾಮರ್ಥ್ಯವನ್ನು ನಾವು ಈಗಾಗಲೇ ನೋಡಿದ್ದೇವೆ ಹಾಗೂ ಅವರು ಅತ್ಯುತ್ತಮವಾಗಿ ಮನರಂಜನೆಯನ್ನು ನೀಡುತ್ತಾರೆ. ಸತತ ಎರಡು ದ್ವಿಶತಕಗಳನ್ನು ಸಿಡಿಸುವುದು ಅಷ್ಟೊಂದು ಸುಲಭವಲ್ಲ. ನೀವು ರನ್‌ ಹೊಡೆಯಬೇಕೆಂಬ ಹಸಿವು ಹಾಗೂ ಗುಣಮಟ್ಟದ ಬ್ಯಾಟಿಂಗ್‌ ಇದ್ದರೆ ಮಾತ್ರ ಇದು ಸಾಧ್ಯ,” ಎಂದು ತಿಳಿಸಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ವಿಶ್ವದ ಶ್ರೇಷ್ಠ ಬೌಲರ್‌

“ಜಸ್‌ಪ್ರೀತ್‌ ಬುಮ್ರಾ ವಿಶ್ವದ ಅತ್ಯುತ್ತಮ ಫಾಸ್ಟ್‌ ಬೌಲರ್‌ ಆಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್‌ ಕಮಿನ್ಸ್‌ ಇದ್ದಾರೆ. ಅದೇ ರೀತಿ ಭಾರತಕ್ಕೆ ಬುಮ್ರಾ ಇದ್ದಾರೆ. ಎರಡೂ ತಂಡಗಳಲ್ಲಿರುವ ಬೆಸ್ಟ್‌ ಬೌಲರ್‌ಗಳಿವರು. ಜಸ್‌ಪ್ರೀತ್‌ ಬುಮ್ರಾ ಅವರ ವೃತ್ತಿ ಜೀವನದ ಈ ಹಂತದಲ್ಲಿ ನೀವು ನೋಡುವುದಾದರೆ, ಅವರ ಬಗ್ಗೆ ಚೆಂಡು ಹೆಚ್ಚಾಗಿ ಮಾತನಾಡುತ್ತದೆ. ಅವರು ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯಬಲ್ಲರು,” ಎಂದು ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.

IND vs AUS: ʻಜೈಸ್ವಾಲ್‌-ಗಿಲ್‌ ಓಪನರ್ಸ್‌ʼ, ಪರ್ತ್‌ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ರವಿ ಶಾಸ್ತ್ರಿ!

ಆಸ್ಟ್ರೇಲಿಯಾ ತಂಡಕ್ಕೆ ಕಮಿನ್ಸ್-ಸ್ಮಿತ್‌ ಕೀ ಆಟಗಾರರು

ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್‌ ಕಮಿನ್ಸ್‌ ಹಾಗೂ ಸ್ಟೀವನ್‌ ಸ್ಮಿತ್‌ ಕೀ ಆಟಗಾರರಾಗಿದ್ದಾರೆಂದು ಇದೇ ವೇಳೆ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಪ್ಯಾಟ್‌ ಕಮಿನ್ಸ್‌ ಆಸ್ಟ್ರೇಲಿಯಾ ತಂಡದಲ್ಲಿದ್ದಾರೆ. ಇವರು ಪಟ್ಟು ಬಿಡದ ಆಟಗಾರ. ನೇಥನ್‌ ಲಯಾನ್‌ ಅವರನ್ನು ನೀವು ಕಡೆಗಣಿಸಬೇಡಿ ಏಕೆಂದರೆ ಭಾರತದ ವಿರುದ್ಧ ಅವರ ತವರು ಮತ್ತು ಹೊರಗಿನ ದಾಖಲೆಗಳು ಅತ್ಯುತ್ತಮವಾಗಿವೆ. ಆದರೆ, ಎದುರಾಳಿ ತಂಡದ ಆರಂಭಿಕ ಹಾದಿಯನ್ನು ಕಮಿನ್ಸ್‌ ಹಾನಿ ಮಾಡಬಲ್ಲರು. ಆ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆಯನ್ನು ತಂದುಕೊಡಬಲ್ಲರು,” ಎಂದು ಮಾಜಿ ಕೋಚ್‌ ಅಂದಾಜಿಸಿದ್ದಾರೆ.

“ಇನ್ನು ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ಎಕ್ಸ್‌ ಫ್ಯಾಕ್ಟರ್‌ ಆಟಗಾರ ಸ್ಟೀವನ್‌ ಸ್ಮಿತ್‌. ಏಕೆಂದರೆ ಅವರ ದಾಖಲೆಗಳು ಇದಕ್ಕೆ ಸಾಕ್ಷಿ. ಆದರೆ ಅವರ ವೃತ್ತಿ ಜೀವನದ ಈ ಹಂತ ಅತ್ಯಂತ ಸವಾಲುದಾಯಕವಾಗಿದೆ ಹಾಗೂ ಇದನ್ನು ಅವರು ಮೆಟ್ಟಿ ನಿಲ್ಲಬಲ್ಲರು. ಭಾರತದ ವಿರುದ್ದ ಸ್ಮಿತ್‌ಗೆ ಇದು ಕೊನೆಯ ಸರಣಿ ಆಗಬಹುದು. ಹಾಗಾಗಿ ಅವರು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ,” ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.