Sunday, 24th November 2024

IND vs AUS: ಕೊಹ್ಲಿ-ರೋಹಿತ್‌ ಅಲ್ಲ, ಟೆಸ್ಟ್‌ ಸರಣಿಯಲ್ಲಿ ಗರಿಷ್ಠ ರನ್‌ ಗಳಿಸಬಲ್ಲ ಬ್ಯಾಟರ್ಸ್‌ ಆರಿಸಿದ ರಿಕಿ ಪಾಂಟಿಂಗ್‌!

IND vs AUS: Ricky Ponting backs Pant and Smith to be top scorers in Australia vs India Tests

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ರಿಷಭ್‌ ಪಂತ್‌ ಹಾಗೂ ಸ್ಟೀವನ್‌ ಸ್ಮಿತ್‌ ಅವರು ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಲಿದ್ದಾರೆಂದು ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ಭವಿಷ್ಯ ನುಡಿದಿದ್ದಾರೆ. ನವೆಂಬರ್‌ 22ರಂದು ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಈ ಎರಡೂ ತಂಡಗಳಿಗೆ ಈ ಟೆಸ್ಟ್‌ ಸರಣಿಯು ಅತ್ಯಂತ ನಿರ್ಣಾಯಕವಾಗಲಿದೆ.

ಉಭಯ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರಿಷಭ್‌ ಪಂತ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂಬ ಅಂಶವನ್ನು ಕೂಡ ಇದೇ ವೇಳೆ ಪಾಂಟಿಂಗ್‌ ತಿಳಿಸಿದ್ದಾರೆ. ಭಾರತದ ವಿರುದ್ದ ಸ್ಟೀವನ್‌ ಸ್ಮಿತ್‌ ಅವರು ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಟೀಮ್‌ ಇಂಡಿಯಾ ಎದುರು ಅವರು 65.87ರ ಸರಾಸರಿಯಲ್ಲಿ 9 ಶತಕಗಳು ಹಾಗೂ ಐದು ಅರ್ಧಶತಕಗಳೊಂದಿಗೆ 2042 ರನ್‌ಗಳನ್ನು ಕಲೆ ಹಾಕಿದ್ದಾರೆ.

“ರಿಷಭ್‌ ಪಂತ್‌ ಅಥವಾ ಸ್ಟೀವನ್‌ ಸ್ಮಿತ್‌ ಅವರ ನಡುವೆ ಒಬ್ಬರು ಟೆಸ್ಟ್‌ ಸರಣಿಯಲ್ಲಿ ಗರಿಷ್ಠ ಸ್ಕೋರರ್‌ ಆಗಲಿದ್ದಾರೆ. ಸ್ಮಿತ್‌ ಅವರು ಅಗ್ರ ಕ್ರಮಾಂಕದಿಂದ ನಾಲ್ಕನೇ ಕ್ರಮಾಂಕಕ್ಕೆ ಇಳಿದಿದ್ದಾರೆ. ಅವರು ನಾಲ್ಕನೇ ಕ್ರಮಾಂಕದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದು, ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ನಿರ್ಣಾಯಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಸಾಧ್ಯತೆ ಇದೆ. ಬಹುಶಃ ಅವರು ನಾಲ್ಕನೇ ಕ್ರಮಾಂಕದಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಮುಗಿಸುವ ಸಾಧ್ಯತೆ ಇದೆ,” ಎಂದು ಭವಿಷ್ಯ ನುಡಿದಿದ್ದಾರೆ.

ರಿಷಭ್‌ ಪಂತ್‌ ಅಪಾಯಕಾರಿ ಬ್ಯಾಟ್ಸ್‌ಮನ್‌

ಚೆಂಡು ಹೊಳಪು ಕಳೆದುಕೊಂಡು ಹಳೆಯದಾಗುತ್ತಿದ್ದಂತೆ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಅಪಾಯಕಾರಿ ಬ್ಯಾಟ್ಸ್‌ಮನ್‌ ಕಾಣಿಸಿಕೊಳ್ಳಲಿದ್ದಾರೆಂದು ಇದೇ ವೇಳೆ ರಿಕಿ ಪಾಂಟಿಂಗ್‌ ಹೇಳಿದ್ದಾರೆ.

“ರಿಷಭ್‌ ಪಂತ್‌ ಅವರು ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರಲಿದ್ದಾರೆ. ಈ ವೇಳೆ ಚೆಂಡು ತನ್ನ ಹೊಳಪು ಮತ್ತು ಕಠಿಣತೆಯನ್ನು ಕಳೆದುಕೊಂಡಿರುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬಲ್ಲ ರಿಷಭ್‌ ಪಂತ್‌ ಅಪಾಯಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಬಾರಿ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸುವ ಸಾಧ್ಯತೆ ಇದೆ,” ಎಂದು ಆಸೀಸ್‌ ಮಾಜಿ ನಾಯಕ ಭವಿಷ್ಯ ನುಡಿದಿದ್ದಾರೆ.

ರಿಷಭ್‌ ಪಂತ್‌ ಟೆಸ್ಟ್‌ಗೆ ಕಮ್‌ಬ್ಯಾಕ್‌

ರಿಷಭ್‌ ಪಂತ್‌ ಅವರು ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ ಬಳಿಕ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಆಡಿದ ಐದು ಪಂದ್ಯಗಳಿಂದ 46.88ರ ಸರಾಸರಿ ಮತ್ತು 86.47ರ ಸ್ಟ್ರೈಕ್‌ ರೇಟ್‌ನಲ್ಲಿ 422 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾದಲ್ಲಿಯೂ ಪಂತ್‌ ಅವರ ಟೆಸ್ಟ್‌ ದಾಖಲೆ ಉತ್ತಮವಾಗಿದೆ. ಅವರು ಕಾಂಗರೂ ನಾಡಿನಲ್ಲಿ 12 ಇನಿಂಗ್ಸ್‌ಗಳಿಂದ ಒಂದು ಶತಕ ಮತ್ತು ಎರಡು ಬಾರಿ 80ಕ್ಕೂ ಅಧಿಕ ರನ್‌ಗಳೊಂದಿಗೆ 624 ರನ್‌ಗಳನ್ನು ಗಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿ ಗೆಲ್ಲಲು ಭಾರತಕ್ಕೆ ಉಪಯುಕ್ತ ಸಲಹೆ ನೀಡಿದ ಮೈಕಲ್‌ ವಾನ್‌!