Friday, 22nd November 2024

IND vs AUS: 37 ರನ್‌ಗೆ ಔಟಾದರೂ ನೂತನ ಮೈಲುಗಲ್ಲು ಸ್ಥಾಪಿಸಿದ ರಿಷಭ್‌ ಪಂತ್‌!

Rishabh Pant Becomes First Player In The World to score 2000 runs as a wicketkeeper in WTC

ಪರ್ತ್‌: ಭಾರತ ತಂಡದ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಪಂತ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ವಿಕೆಟ್‌ ಕೀಪರ್‌ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಆಫ್ಟಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತದ ಆಟಗಾರ ಈ ಕೀರ್ತಿಗೆ ಭಾಜನರಾಗಿದ್ದಾರೆ.

ಶುಕ್ರವಾರ ಆರಂಭವಾದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಭ್‌ ಪಂತ್‌ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ 78 ಎಸೆತಗಳಲ್ಲಿ 37 ರನ್‌ಗಳನ್ನು ಗಳಿಸಿ ಉತ್ತಮ ಆರಂಭವನ್ನು ಪಡೆದ್ದರು. ಆದರೆ, ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಸ್ಲಿಪ್‌ನಲ್ಲಿ ಕ್ಯಾಚಿತ್ತರು. ಆ ಮೂಲಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.

IND vs AUS: 150 ರನ್‌ಗೆ ಕುಸಿದ ಟೀಮ್‌ ಇಂಡಿಯಾ

2000 ರನ್‌ಗಳಿಸಿದ ವಿಶ್ವದ ಮೊದಲ ವಿಕೆಟ್‌ ಕೀಪರ್‌

37 ರನ್‌ಗಳ ಮೂಲಕ ರಿಷಭ್‌ ಪಂತ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 2034 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ವಿಕೆಟ್‌ ಕೀಪರ್‌ ಎಂಬ ದಾಖಲೆಯನ್ನು ರಿಷಭ್‌ ಪಂತ್‌ ಬರೆದಿದ್ದಾರೆ. ಇಂಗ್ಲೆಂಡ್‌ ತಂಡದ ಒಲ್ಲೀ ಪೋಪ್‌ ಹಾಗೂ ನ್ಯೂಜಿಲೆಂಡ್‌ ತಂಡ ಟಾಮ್‌ ಲೇಥಮ್‌ ಅವರು ಕೂಡ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಇವರು ತಮ್ಮ-ತಮ್ಮ ರಾಷ್ಟ್ರಗಳಿಗೆ ವಿಕೆಟ್‌ ಕೀಪರ್‌ ಆಡಿದ್ದು ಕ್ರಮವಾಗಿ ಕೇವಲ 4 ಮತ್ತು ಒಂದೇ ಇನಿಂಗ್ಸ್‌ನಲ್ಲಿ ಮಾತ್ರ.

ಭಾರತೀಯ ಮೂರನೇ ಬ್ಯಾಟ್ಸ್‌ಮನ್‌

ಭಾರತ ತಂಡದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ಕೂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ 2000 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಇಬ್ಬರ ಬಳಿಕ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ರಿಷಭ್‌ ಪಂತ್‌ ಬರೆದಿದ್ದಾರೆ.

IND vs AUS: ಪರ್ತ್‌ನಲ್ಲಿ ವೇಗಿಗಳ ದರ್ಬಾರ್; ಭಾರತದ ಹಿಡಿತದಲ್ಲಿ ಮೊದಲ ಟೆಸ್ಟ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು

ರೋಹಿತ್‌ ಶರ್ಮಾ: 2685 ರನ್‌ಗಳು
ವಿರಾಟ್‌ ಕೊಹ್ಲಿ: 2432 ರನ್‌ಗಳು
ರಿಷಭ್‌ ಪಂತ್‌: 2034 ರನ್‌ಗಳು
ಶುಭಮನ್‌ ಗಿಲ್‌: 1800 ರನ್‌ಗಳು
ಚೇತೇಶ್ವರ್‌ ಪೂಜಾರ: 1769 ರನ್‌ಗಳು

ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಭಾರತ

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಮೊದಲನೇ ಪ್ರಾಬಲ್ಯ ಮೆರೆದಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ, ಮೊಡಲನೇ ದಿನದಾಟದ ಅಂತ್ಯಕ್ಕೆ 27 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 67 ರನ್‌ಗಳನ್ನು ಗಳಿಸಿದೆ. ಆಸ್ಟ್ರೇಲಿಯಾ ತಂಡ 83 ರನ್‌ಗಳ ಹಿನ್ನಡೆಯಲ್ಲಿದೆ.