Thursday, 12th December 2024

IND vs AUS: 20 ನಿಮಿಷ ತಡವಾಗಿ ಬಂದ ಯಶಸ್ವಿ ಜೈಸ್ವಾಲ್‌ ವಿರುದ್ಧ ರೋಹಿತ್‌ ಶರ್ಮಾ ಆಕ್ರೋಶ!

IND vs AUS: Rohit Sharma Furious At Yashasvi Jaiswal's Indiscipline, Departs For Brisbane Leaving Youngster Behind

ಬ್ರಿಸ್ಬೇನ್‌: ಭಾರತ ತಂಡದಿಂದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ (IND vs AUS) ಮೂರನೇ ಟೆಸ್ಟ್‌ಗೂ ಮುನ್ನ ನಾಯಕ ರೋಹಿತ್ ಶರ್ಮಾ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಅಶಿಸ್ತಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ. ಎಡಗೈ ಬ್ಯಾಟ್ಸ್‌ಮನ್‌ನ ಹೊರತುಪಡಿಸಿ ಟೀಮ್‌ ಇಂಡಿಯಾ ಬಸ್ ಹೊರಟಿತ್ತು.

ಬ್ರಿಸ್ಬೇನ್‌ಗೆ ತೆರಳುವ ಸಲುವಾಗಿ ಭಾರತ ತಂಡದ ಆಟಗಾರರು ಬುಧವಾರ ಮುಂಜಾನೆ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು. ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರು ತಮ್ಮ ಕುಟುಂಬಗಳೊಂದಿಗೆ ಚಾರ್ಟರ್ಡ್ ಫ್ಲೈಟ್‌ನಲ್ಲಿ ಬ್ರಿಸ್ಬೇನ್‌ಗೆ ಪ್ರಯಾಣಿಸಿದ್ದರು. ಆದರೆ ಸಹಾಯಕ ಸಿಬ್ಬಂದಿ ಮತ್ತು ಚೀಫ್‌ ಸೆಲೆಕ್ಟರ್‌ ಅಜಿತ್ ಅಗರ್ಕರ್ ಸೇರಿದಂತೆ ಟೀಮ್‌ ಇಂಡಿಯಾ ಆಟಗಾರರು ಸ್ಥಳೀಯ ಸಮಯ 8:30 ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಲು ಸಮಯವನ್ನು ನಿಗದಿ ಮಾಡಲಾಗಿತ್ತು. ಆದರೆ, ಯುವ ಆಲ್‌ರೌಂಡರ್ ನಿತೀಶ್‌ ರೆಡ್ಡಿ‌ ತಮ್ಮ ವಸ್ತುವೊಂದನ್ನು ಬಿಟ್ಟುಬಂದಿದ್ದ ಕಾರಣ ಬಸ್‌ನಿಂದ ಇಳಿದು ಮತ್ತೆ ಹೋಟೆಲ್‌ಗೆ ತೆರಳಿ ಬಂದಿದ್ದದಿಂದ ಸಮಯ 08:40 ಆಗಿತ್ತು.

ತಡ ಮಾಡಿದ ಯಶಸ್ವಿ ಜೈಸ್ವಾಲ್‌

ಆದರೂ ಬಸ್‌ನಲ್ಲಿ ಒಬ್ಬ ಆಟಗಾರ ಗೈರಾಗಿರುವುದು ತಿಳಿದುಬಂದಿತ್ತು. ಯಶಸ್ವಿ ಜೈಸ್ವಾಲ್‌ ಅವರು ಬಸ್‌ ಸಮೀಪ ಬರುವುದು ತಡವಾಯಿತು. ಈ ವೇಳೆ ಭದ್ರತಾ ಅಧಿಕಾರಿಗಳು ಬಸ್‌ನಿಂದ ಕೆಳಗೆ ಇಳಿದು ಸುತ್ತು-ಮತ್ತು ನೋಡಿದರು. ಆದರೂ ಜೈಸ್ವಾಲ್‌ ಬಸ್‌ ಬಳಿ ಬರಲಿಲ್ಲ ಹಾಗೂ ಅವರ ವಿಳಂಬಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ತಾಳ್ಮೆ ಕಳೆದುಕೊಂಡು ನಾಯಕ ರೋಹಿತ್‌ ಶರ್ಮಾ ಕೂಡ ಬಸ್‌ನಿಂದ ಕೆಳಗೆ ಇಳಿದು ಭದ್ರತಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು ಹಾಗೂ ಯುವ ಬ್ಯಾಟ್ಸ್‌ಮನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಜೈಸ್ವಾಲ್‌ ಇಲ್ಲದೆ ಬಸ್‌ ಅಡಿಲೇಡ್‌ ವಿಮಾನ ನಿಲ್ದಾಣದತ್ತ ಹೊರಟಿತು.

20 ನಿಮಿಷ ತಡವಾಗಿ ಬಂದ ಜೈಸ್ವಾಲ್‌

ಬಸ್ ಹೊರಟು 20 ನಿಮಿಷಗಳ ನಂತರ ಜೈಸ್ವಾಲ್ ಲಾಬಿ ಪ್ರದೇಶವನ್ನು ತಲುಪಿದರು ಎಂದು ವರದಿ ತಿಳಿಸಿದೆ. ತಂಡದ ಮ್ಯಾನೇಜ್‌ಮೆಂಟ್‌ ಅವರಿಗೆ ಪ್ರತ್ಯೇಕ ಕಾರಿನ ವ್ಯವಸ್ಥೆಯನ್ನು ಮಾಡಿತ್ತು. ತಂಡದ ಹಿರಿಯ ಭದ್ರತಾ ಅಧಿಕಾರಿ ಜೈಸ್ವಾಲ್‌ ಅವರನ್ನು ಕಾರಿನಲ್ಲಿ ಕರೆದುಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಭಾರತೀಯ ಆಟಗಾರರು ಬುಧವಾರ ಬ್ರಿಸ್ಬೇನ್ ತಲುಪಿ ಒಂದು ದಿನ ರಜೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಗುರುವಾರ ಭಾರತ ತಂಡದ ಎಲ್ಲಾ ಆಟಗಾರರು ಅಭ್ಯಾಸವನ್ನು ಆರಂಭಿಸಿದ್ದರು.

ಅಭ್ಯಾಸ ಆರಂಭಿಸಿದ ವಿರಾಟ್‌ ಕೊಹ್ಲಿ

ಡೇ-ನೈಟ್‌ ಟೆಸ್ಟ್‌ ಸೋಲಿನ ನಂತರ ಭಾರತ ತಂಡ ಗೆಲುವಿನ ಲಯಕ್ಕೆ ಮರಳಬೇಕೆಂದರೆ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ಫಾರ್ಮ್‌ಗೆ ಮರಳಬೇಕಾಗಿದೆ. ಅಭ್ಯಾಸದ ವೇಳೆ ವಿರಾಟ್‌ ಕೊಹ್ಲಿ ಎಂದಿನಂತೆ ಉಲ್ಲಾಸದೊಂದಿಗೆ ಕಂಡು ಬಂದಿದ್ದಾರೆ. ಅವರು ಭಾರತದ ಅಭ್ಯಾಸದ ಅವಧಿಯ ಆರಂಭದಲ್ಲಿ ಪೆಪ್ ಟಾಕ್ ನೀಡಿದರು ಮತ್ತು ನಂತರ ಸಹಾಯಕ ಕೋಚ್ ರಿಯಾನ್ ಟೆನ್ ಡಿಶ್ಚಾಟ್‌ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದರು, ಅವರ ಬ್ಯಾಟಿಂಗ್ ನ್ಯೂನತೆಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಈ ಸರಣಿಯಲ್ಲಿ ಇಲ್ಲಿಯವರೆಗೆ ಕೊಹ್ಲಿ, ಆಫ್ ಸ್ಟಂಪ್‌ನ ಹೊರಗಿನ ಎಸೆತಗಳಲ್ಲಿ ಔಟ್ ಆಗಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್‌ ಸಿರಾಜ್‌ಗೆ ದಂಡ ವಿಧಿಸಬೇಕಿತ್ತೆಂದ ಮೈಕಲ್‌ ಕ್ಲಾರ್ಕ್‌!