Thursday, 21st November 2024

IND vs AUS: ಪರ್ತ್‌ ಟೆಸ್ಟ್‌ಗೆ ಅಶ್ವಿನ್‌ ಬದಲು ವಾಷಿಂಗ್ಟನ್‌ ಸುಂದರ್‌ ಆಡಬೇಕೆಂದ ಸಂಜಯ್‌ ಮಾಂಜ್ರೇಕರ್‌!

Sanjay Manjrekar backs Washington Sundar

ಪರ್ತ್‌: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅವರ ಬದಲು ಯುವ ಸ್ಪಿನ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್‌ ಆಗ್ರಹಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಶುಕ್ರವಾರ ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 07: 50ಕ್ಕೆ ಆರಂಭವಾಗಲಿದೆ. ನಾಯಕ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ವಿಭಿನ್ನ ಕಾರಣಗಳಿಂದ ಪರ್ತ್‌ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನಾಯಕ ಜಸ್‌ಪ್ರೀತ್‌ ಬುಮ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದರ ನಡುವೆ ಭಾರತದ ಪ್ಲೇಯಿಂಗ್‌ XIನಲ್ಲಿ ಹಲವು ಬದಲಾವಣೆಗಳನ್ನು ನೋಡಬಹುದಾಗಿದೆ.

ದೇವದತ್‌ ಪಡಿಕ್ಕಲ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಅವರು ಭಾರತ ತಂಡದ ಪ್ಲೇಯಿಂಗ್‌ XI ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಗಾಯಾಳು ಶುಭಮನ್‌ ಗಿಲ್‌ ಸ್ಥಾನದಲ್ಲಿ ಪಡಿಕ್ಕಲ್‌ ಆಡಿದರೆ, 7 ಅಥವಾ 8ನೇ ಕ್ರಮಾಂಕದಲ್ಲಿ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿ ನಿತೀಶ್‌ ರೆಡ್ಡಿ ಆಡಬಹುದು. ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆಗಿನ ಸಂಭಾಷಣೆಯಲ್ಲಿ ಸಂಜಯ್‌ ಮಾಜ್ರೇಕರ್‌, ಭಾರತ ತಂಡದ ಪ್ಲೇಯಿಂಗ್‌ xiನಲ್ಲಿ ಮಹತ್ತರ ಬದಲಾವಣೆಯನ್ನು ಸೂಚಿಸಿದ್ದಾರೆ.

IND vs AUS: ಮೂರನೇ ಕ್ರಮಾಂಕಕ್ಕೆ ಪಡಿಕ್ಕಲ್ ಫಿಕ್ಸ್‌

“ಕೊನೆಯ ಬಾರಿ ಸಿಡ್ನಿ ಟೆಸ್ಟ್‌ನಲ್ಲಿ ಆರ್‌ ಅಶ್ವಿನ್‌ ಬ್ಯಾಟಿಂಗ್‌ನಲ್ಲಿ ಉತ್ತಮ ಹೋರಾಟ ನಡೆಸಿದ್ದರು ಹಾಗೂ ಈ ಪಂದ್ಯ ಡ್ರಾ ಆಗಿತ್ತು. ಆದರೆ, ಅನಿರೀಕ್ಷಿತವಾಗಿ ಅಶ್ವಿನ್‌ ಅವರ ವಿದೇಶಿ ನೆಲದಲ್ಲಿನ ಟೆಸ್ಟ್‌ ಬ್ಯಾಟಿಂಗ್‌ ಅಂಕಿಅಂಶಗಳು ಅಷ್ಟೊಂದು ಉತ್ತಮವಾಗಿಲ್ಲ. ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಲ್ಲಿನ ಬ್ಯಾಟಿಂಗ್‌ ಪ್ರದರ್ಶನ ಹಾಗೂ ಭಾರತದಲ್ಲಿನ ಟೆಸ್ಟ್‌ ಬ್ಯಾಟಿಂಗ್‌ ಪ್ರದರ್ಶನವನ್ನು ನೀವು ಹೋಲಿಕೆ ಮಾಡಬಹುದು. ಇದರಲ್ಲಿ ದೊಡ್ಡ ವ್ಯತ್ಯಾಸವಿದೆ,” ಎಂದು ಸಂಜಯ್‌ ಮಾಂಜ್ರೇಕರ್‌ ತಿಳಿಸಿದ್ದಾರೆ.

ಅಶ್ವಿನ್‌ ಅವರ ವಿದೇಶಿ ಟೆಸ್ಟ್‌ ಅಂಕಿಅಂಶಗಳು

ಆರ್‌ ಅಶ್ವಿನ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಲ್ಲಿಯತನಕ 1989 ರನ್‌ಗಳನ್ನು ಭಾರತದಲ್ಲಿ ಸಿಡಿಸಿದ್ದಾರೆ. ಆದರೆ, ಆಸ್ಟ್ರೇಲಿಯಾದಲ್ಲಿ 10 ಪಂದ್ಯಗಳಿಂದ 384 ರನ್‌ಗಳು, ಬಾಂಗ್ಲಾದೇಶದಲ್ಲಿ 114 ರನ್‌ಗಳು, ಇಂಗ್ಲೆಂಡ್‌ನಲ್ಲಿ 261 ರನ್‌ಗಳು, ನ್ಯೂಜಿಲೆಂಡ್‌ನಲ್ಲಿ ನಾಲ್ಕು ರನ್‌, ದಕ್ಷಿಣ ಆಫ್ರಿಕಾದಲ್ಲಿ 205 ರನ್‌ಗಳು, ಶ್ರೀಲಂಕಾದಲ್ಲಿ 226 ರನ್‌ಗಳು ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ 291 ರನ್‌ಗಳನ್ನು ಅಶ್ವಿನ್‌ ಗಳಿಸಿದ್ದಾರೆ.

IND vs AUS: ಪರ್ತ್‌ನಲ್ಲಿ ಆಸ್ಟ್ರೇಲಿಯಾಗೆ ಭಾರತ ಚಾಲೆಂಜ್‌, ಗೆಲ್ಲುವ ನೆಚ್ಚಿನ ತಂಡ ಯಾವುದು?

ಅಶ್ವಿನ್‌ ಬದಲು ವಾಷಿಂಗ್ಟನ್‌ ಸುಂದರ್‌ ಆಡಬೇಕು: ಮಾಂಜ್ರೇಕರ್‌

“ಹೌದು, ಆರ್‌ ಅಶ್ವಿನ್‌ ಅವರೇ ಮೊದಲನೇ ಟೆಸ್ಟ್‌ ಆಡಬೇಕೆಂದು ಬಹುತೇಕ ಮಂದಿ ಹೇಳುತ್ತಿದ್ದಾರೆ. ಅವರ ಹೆಸರನ್ನು ನೋಡಿ ಎಲ್ಲರೂ ಈ ರೀತಿ ಹೇಳುತ್ತಿದ್ದಾರೆ. ಆದರೆ, ಒಮ್ಮೆ ಅವರ ವಿದೇಶಿ ಟೆಸ್ಟ್‌ ಪಂದ್ಯಗಳ ಅಂಕಿ ಅಂಶಗಳನ್ನು ಒಮ್ಮೆ ನೋಡಬೇಕಾಗಿದೆ. ಇದರ ಜೊತೆಗೆ ಅವರ ಸದ್ಯದ ಫಾರ್ಮ್‌ ಅನ್ನು ಕೂಡ ನೋಡಬೇಕು. ಆದರೆ, ಮೊದಲನೇ ಟೆಸ್ಟ್‌ ಪಂದ್ಯಕ್ಕೆ ನಾನು ಆರ್‌ ಅಶ್ವಿನ್‌ ಅವರ ಬದಲು ವಾಷಿಂಗ್ಟನ್‌ ಸುಂದರ್‌ ಅವರನ್ನು ನೋಡಲು ಬಯಸುತ್ತೇನೆ. ಏಕೆಂದರೆ ಅವರು ಅತ್ಯುತ್ತಮ ಆಯ್ಕೆಯಾಗಿದೆ,” ಎಂದು ಸಂಜಯ್‌ ಮಾಂಜ್ರೇಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.