Monday, 18th November 2024

IND vs AUS: ಆಸ್ಟ್ರೇಲಿಯಾದಲ್ಲಿ ಅಶ್ವಿನ್‌ಗೆ ಅವಕಾಶ ನೀಡಲೇಬೇಕೆನ್ನಲು ಬಲವಾದ ಕಾರಣ ತಿಳಿಸಿದ ಗಂಗೂಲಿ!

IND vs AUS: 'There is no debate, he must play'-Sourav Ganguly wants India to play R Ashwin in pace-friendly Perth

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (IND vs AUS) ಮೊದಲನೇ ಪಂದ್ಯದಲ್ಲಿ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ ಅವಕಾಶ ನೀಡಬೇಕೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ ಆಗ್ರಹಿಸಿದ್ದಾರೆ ಹಾಗೂ ಇದಕ್ಕೆ ಬಲವಾದ ಕಾರಣವನ್ನು ವಿವರಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 22 ರಂದು ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಪರ್ತ್‌ ಪಿಚ್‌ ಮೇಲೆ 10ಎಂಎಂ ಹುಲ್ಲನ್ನು ಬೆಳೆಸಲಾಗಿದೆ. ಈ ಹಿನ್ನೆಲೆಯಲ್ಲಿ ಫಾಸ್ಟ್‌ ಬೌಲರ್‌ಗಳಿಗೆ ಈ ಪಿಚ್‌ ಬೌನ್ಸ್‌ ಹಾಗೂ ವೇಗಕ್ಕೆ ನೆರವು ನೀಡಲಿದೆ. ಈ ಕಾರಣದಿಂದಾಗಿ ಎರಡೂ ತಂಡಗಳು ಹೆಚ್ಚಿನದಾಗಿ ವೇಗದ ಬೌಲರ್‌ಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಹಾಗೂ ಇದರ ಜೊತೆಗೆ ಏಕೈಕ ಸ್ಪಿನ್ನರ್‌ ಅನ್ನು ಆಡಿಸಬಹುದು. ಆದರೂ ಭಾರತ ತಂಡ, ಗುಣಮಟ್ಟದ ಸ್ಪಿನ್ನರ್‌ ಆರ್‌ ಅಶ್ವಿನ್‌ ಅವರನ್ನು ಆಡಿಸಬೇಕೆಂದು ಸಲಹೆ ನೀಡಿದ್ದಾರೆ,

ಆರ್‌ ಅಶ್ವಿನ್‌ ಆಡಬೇಕೆಂದ ಗಂಗೂಲಿ

ಎನ್‌ಡಿ ಟಿವಿ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸೌರವ್‌ ಗಂಗೂಲಿ, “ಆರ್‌ ಅಶ್ವಿನ್‌ ಅವರು ಖಂಡಿತವಾಗಿಯೂ ಆಡಬೇಕು. ಈ ಬಗ್ಗೆ ಯಾವುದೇ ಚರ್ಚೆ ಬೇಡ. ನಿಮ್ಮ ಅತ್ಯುತ್ತಮ ಸ್ಪಿನ್ನರ್‌ ಅನ್ನು ಆಡಿಸಲೇಬೇಕು. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ನೀವು ಸ್ಪೆಷಲಿಸ್ಟ್‌ಗಳನ್ನು ಆಡಿಸಲೇಬೇಕಾಗುತ್ತದೆ. ಅದರಲ್ಲಿಯೂ ಆಸ್ಟ್ರೇಲಿಯಾ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳು ಜಾಸ್ತಿ ಇದ್ದಾರೆ. ಹಾಗಾಗಿ ಆರ್‌ ಅಶ್ವಿನ್‌ ಅವರು ಇಲ್ಲಿ ಪರಿಣಾಮ ಬೀರಬಲ್ಲರು,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಹೌದು, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ತಂಡದಲ್ಲಿದ್ದಾರೆ ಹಾಗೂ ಬೌಲಿಂಗ್‌ ಜತೆಗೆ ಇವರು ಅದ್ಭುತವಾಗಿ ಬ್ಯಾಟ್‌ ಮಾಡುತ್ತಾರೆ. ಆದರೆ, ನೀವು ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಅತ್ಯುತ್ತಮ ಸ್ಪಿನ್ನರ್‌ ಅನ್ನು ಆಡಿಸಬೇಕಾಗುತ್ತದೆ. ನೀವು ವಿಶೇಷ ಬ್ಯಾಟ್ಸ್‌ಮನ್‌ ಹಾಗೂ ವಿಶೇಷ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಬೇಕು. ಈ ಹಾದಿಯಲ್ಲಿ ನಾನು ಆರ್‌ ಅಶ್ವಿನ್‌ ಅವರನ್ನು ಆಯ್ಕೆ ಮಾಡುತ್ತಿದ್ದೇನೆ,” ಎಂದು ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ವೈಯಕ್ತಿಕ ಕಾರಣದಿಂದಾಗಿ ಮೊದಲನೇ ಟೆಸ್ಟ್‌ ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಪರ್ತ್‌ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಲಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯವನ್ನು ಬರೋಬ್ಬರಿ 85,000 ಅಭಿಮಾನಿಗಳು ವೀಕ್ಷಿಸಲಿದ್ದಾರೆ.

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ಸಿ), ಜಸ್ಪ್ರೀತ್ ಬುಮ್ರಾ (ವಿಸಿ), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆ), ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ಪ್ರಸಿದ್ಧ್ ಕೃಷ್ಣ, ರಿಷಭ್ ಪಂತ್ (ವಿಕೆ) , ಕೆಎಲ್ ರಾಹುಲ್, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.