ನವದೆಹಲಿ: ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಪಾರ ಕೊಡುಗೆಯನ್ನು ನೀಡಿದ್ದಾರೆಂದು ಹೇಳಿದ ಬಿಸಿಸಿಐನ ಮಾಜಿ ಸೆಲೆಕ್ಟರ್ ಚೇತನ್ ಶರ್ಮಾ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾ ವಿರುದ್ದ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯಲ್ಲಿ ಪಾರ್ಮ್‌ಗೆ ಮರಳಲಿದ್ದಾರೆಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ದ ಕಳೆದ ತವರು ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಅದರಂತೆ ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯದಲ್ಲಿಯೂ ಗೆಲ್ಲಲು ಸಾಧ್ಯವಾಗದೆ 0-3 ಅಂತರದಲ್ಲಿ ವೈಟ್ ವಾಷ್ ಆಘಾತ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸಾಮರ್ಥ್ಯ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಅನುಮಾನ ವ್ಯಕ್ತಪಡಿಸಿದ್ದರು.
IND vs AUS: ರಹಸ್ಯ ಸ್ಥಳದಲ್ಲಿ ಟೀಮ್ ಇಂಡಿಯಾ ಅಭ್ಯಾಸ
ಆದರೆ, ಭಾರತ ತಂಡದ ಮಾಜಿ ಆಯ್ಕೆದಾರ ಚೇತನ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ ಹಾಗೂ ಈ ಇಬ್ಬರೂ ಬ್ಯಾಟ್ಸ್‌ಮನ್ ರಾಷ್ಟ್ರೀಯ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆಂದು ಹೇಳುವ ಮೂಲಕ ಗೌರವವನ್ನು ಸಲ್ಲಿಸಿದ್ದಾರೆ. ಅಲ್ಲದೆ ಈ ಇಬ್ಬರೂ ದಿಗ್ಗಜರು ಆಸ್ಟ್ರೇಲಿಯಾದಲ್ಲಿ ಕಮ್‌ಬ್ಯಾಕ್ ಮಾಡಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಚೇತನ್ ಶರ್ಮಾ, “ರಾಷ್ಟ್ರೀಯ ತಂಡಕ್ಕೆ ಕೊಡುಗೆ ನೀಡಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಗೌರವವನ್ನು ಸಲ್ಲಿಸಬೇಕಾಗಿದೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರು ಎಂದಿಗೂ ಔಟ್ ಆಫ್ ಫಾರ್ಮ್ ಇರುವುದಿಲ್ಲ ಹಾಗೂ ಅವರು ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುವುದಿಲ್ಲ. ಇಂಥಾ ಪದಗಳನ್ನು ನಾವು ಅವರಿಗೆ ಬಳಸಬಾರದು. ಅವರಿಗೆ ನಾನು ಕೃತಜ್ಞರಾಗಿರಬೇಕು,” ಎಂದು ತಿಳಿಸಿದ್ದಾರೆ.
IND vs AUS: ಪರ್ತ್ ತಲುಪಿದ ಟೀಮ್ ಇಂಡಿಯಾದ ಮೊದಲ ಬ್ಯಾಚ್
ಹಿರಿಯ ಆಟಗಾರರಿಗೆ ಚೇತನ್ ಶರ್ಮಾ ಬೆಂಬಲ
“ಇನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಉತ್ತಮವಾಗಿದ್ದಾರೆ. ಅವರು ಸೂಪರ್ ಸ್ಟಾರ್‌ಗಳಾಗಿರುವ ಕಾರಣ, ನಾವು ಅವರ ಬಗ್ಗೆ ಯಾವಾಗಲೂ ಮಾತನಾಡುತ್ತೇವೆ ಹಾಗೂ ಅವರು ಪ್ರತಿಯೊಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಬೇಕೆಂಬ ನಿರೀಕ್ಷೆಯನ್ನು ನಾವು ಇಟ್ಟಿರುತ್ತೇವೆ. ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಹಾಗೂ ರೋಹಿತ್ ಅವರನ್ನು ಸುಮ್ಮನೆ ನೋಡಿ. ಅವರು ತಮ್ಮ ಬ್ಯಾಟ್‌ಗಳ ಮೂಲಕ ಮಿಂಚಲಿದ್ದಾರೆ,” ಎಂದು ಮಾಜಿ ಸೆಲೆಕ್ಟರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕೊಹ್ಲಿ-ರೋಹಿತ್ ಅಂಕಿಅಂಶಗಳು
ರೋಹಿತ್ ಶರ್ಮಾ ತವರಿನಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳಿಂದ 13.3ರ ಸರಾಸರಿಯಲ್ಲಿ ಒಂದು ಅರ್ಧಶತಕದೊಂದಿಗೆ 133 ರನ್‌ಗಳನ್ನು ಗಳಿಸಿದ್ದಾರೆ. ಈ ಬಾರಿ ತವರು ಆವೃತ್ತಿಯಲ್ಲಿ ಅವರು ಕ್ರಮವಾಗಿ 6, 5, 23, 8, 2, 52, 0, 8, 18, ಹಾಗೂ 11 ರನ್‌ಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ತವರಿನಲ್ಲಿ ಈ ಬಾರಿ 10 ಇನಿಂಗ್ಸ್‌ಗಳಿಂದ 21.33ರ ಸರಾಸರಿಯಲ್ಲಿ ಕೇವಲ 192 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಕೇವಲ ಒಂದು ಅರ್ಧಶತಕವನ್ನು ಸಿಡಿಸಿದ್ದಾರೆ. ನವೆಂಬರ್ 22 ರಂದು ಪರ್ತ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲನೇ ಟೆಸ್ಟ್ ಆರಂಭವಾಗಲಿದೆ.