Sunday, 24th November 2024

IND vs AUS: ಆಸ್ಟ್ರೇಲಿಯಾದಲ್ಲಿ ಏಳನೇ ಶತಕ ಸಿಡಿಸಿ ಸಚಿನ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

IND vs AUS: Virat Kohli hits 7th Test hundred in Australia, surpasses Sachin in elite list

ಪರ್ತ್‌: ಆಸ್ಟ್ರೇಲಿಯಾ ವಿರುದ್ದ ಇಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ (IND vs AUS) ಪಂದ್ಯದ ಮೂರನೇ ದಿನ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಏಳನೇ ಟೆಸ್ಟ್‌ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ವಿರಾಟ್‌ ಕೊಹ್ಲಿ ಮುರಿದಿದ್ದಾರೆ.

ಇಲ್ಲಿನ ಆಪ್ಟಸ್‌ ಸ್ಟೇಡಿಯಂನಲ್ಲಿ ಮೂರನೇ ದಿನ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ ಅತ್ಯಂತ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು ಎದುರಿಸಿದ 143 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಖಲಿಸಿದರು. ಆ ಮೂಲಕ ಆಸ್ಟ್ರೇಲಿಯಾ ನೆಲದಲಿ ಅತಿ ಹೆಚ್ಚು ಟೆಸ್ಟ್‌ ಶತಕಗಳನ್ನು ಸಿಡಿಸಿದ್ದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಸಚಿನ್‌ ಆಸ್ಟ್ರೇಲಿಯಾ ನೆಲದಲ್ಲಿ ಆರು ಟೆಸ್ಟ್‌ ಶತಕಗಳನ್ನು ಸಿಡಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್‌ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಜ್ಯಾಕ್‌ ಹಾಬ್ಸ್‌ ಬಳಿಕ ನಂತರದ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. ಆಸ್ಟ್ರೇಲಿಯಾ ವಿರುದ್ದ ಅವರದೇ ನೆಲದಲ್ಲಿ ಎಲ್ಲಾ ಸ್ವರೂಪದಲ್ಲಿಯೂ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ವಿದೇಶಿ ಬ್ಯಾಟ್ಸ್‌ಮನ್‌ ಎಂಬ ದಾಖಲೆಯ ಸನಿಹದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ.

IND vs AUS: ಜತೆಯಾಟದಲ್ಲಿ ದಾಖಲೆ ಬರೆದ ಜೈಸ್ವಾಲ್‌-ರಾಹುಲ್‌

30ನೇ ಟೆಸ್ಟ್‌ ಶತಕ ಸಿಡಿಸಿದ ವಿರಾಟ್‌ ಕೊಹ್ಲಿ

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 30ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 36ರ ಪ್ರಾಯದ ಬ್ಯಾಟ್ಸ್‌ಮನ್‌ 81ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ 15 ತಿಂಗಳ ದೀರ್ಘಾವಧಿ ಬಳಿಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕವನ್ನು ಸಿಡಿಸಿದ್ದಾರೆ. 2023ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದ ತಮ್ಮ ಕೊನೆಯ ಟೆಸ್ಟ್‌ ಶತಕವನ್ನು ಸಿಡಿಸಿದ್ದರು.

ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್‌ ಶತಕ ಸಿಡಿಸಿದ ಭಾರತೀಯರು

ವಿರಾಟ್ ಕೊಹ್ಲಿ – 14 ಪಂದ್ಯಗಳಲ್ಲಿ 7 ಶತಕ
ಸಚಿನ್ ತೆಂಡೂಲ್ಕರ್ – 20 ಪಂದ್ಯಗಳಲ್ಲಿ 6 ಶತಕ
ಸುನಿಲ್ ಗವಾಸ್ಕರ್ – 11 ಪಂದ್ಯಗಳಲ್ಲಿ 5 ಶತಕ
ವಿವಿಎಸ್ ಲಕ್ಷ್ಮಣ್ – 15 ಪಂದ್ಯಗಳಲ್ಲಿ 4 ಶತಕ
ಚೇತೇಶ್ವರ್‌ ಪೂಜಾರ – 11 ಪಂದ್ಯಗಳಲ್ಲಿ 3 ಶತಕ

IND vs AUS: ಕೊಹ್ಲಿ, ಜೈಸ್ವಾಲ್‌ ಶತಕ ವೈಭವ; ಸಂಕಷ್ಟದಲ್ಲಿ ಆಸೀಸ್‌

ಆಸ್ಟ್ರೇಲಿಯಾಗೆ 534 ರನ್‌ಗಳ ಗುರಿಯನ್ನು ನೀಡಿದ ಭಾರತ

ವಿರಾಟ್‌ ಕೊಹ್ಲಿ (100*) ಹಾಗೂ ಯಶಸ್ವಿ ಜೈಸ್ವಾಲ್‌ (161) ಶತಕಗಳ ನೆರವಿನಿಂದ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 134. 3 ಓವರ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 487 ರನ್‌ಗಳನ್ನು ಕಲೆ ಹಾಕಿ ಡಿಕ್ಲೆರ್‌ ಘೋಷಿಸಿತು. ಜೈಸ್ವಾಲ್‌ ಜೊತೆಗೆ ಮೊದಲನೇ ವಿಕೆಟ್‌ಗೆ 201 ರನ್‌ಗಳ ಜೊತಡೆಯಾಟವನ್ನು ಆಡಿದ್ದ ಕೆಎಲ್‌ ರಾಹುಲ್‌ ಕೂಡ 77 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 534 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 4.2 ಓವರ್‌ಗಳಿಗೆ ಕೇವಲ 12 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆ ಮೂಲಕ ಆರಂಭಿಕ ಆಘಾತ ಅನುಭವಿಸಿದೆ.