ನವದೆಹಲಿ: ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಇತ್ತೀಚೆಗೆ ಬಿಸಿಸಿಐ ಹಂಚಿಕೊಂಡಿರುವ ವಿಡಿಯೊದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದಲ್ಲಿ ತಾವು ಸಿಡಿಸಿರುವ ನೆಚ್ಚಿನ ಶತಕವನ್ನು ಯಾವುದೆಂದು ಬಹಿರಂಗಪಡಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ವಿರಾಟ್ ಕೊಹ್ಲಿ ಒಟ್ಟು 29 ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ ಹಾಗೂ ಇದರಲ್ಲಿ ಆರು ಶತಕಗಳನ್ನು ಆಸ್ಟ್ರೇಲಿಯಾದಲ್ಲಿ ಸಿಡಿಸಿದ್ದಾರೆ. ಇದರಲ್ಲಿ 2014-15ರ ಏಕೈಕ ಪ್ರವಾಸದಲ್ಲಿ ಅವರು ನಾಲ್ಕು ಶತಕಗಳನ್ನು ಸಿಡಿಸಿರುವುದು ವಿಶೇಷ.
2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಮೊದಲ ಟೆಸ್ಟ್ ಸರಣಿ ಆಡಿದ್ದರು. ಈ ವೇಳೆ ಅವರು ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಎರಡು ಶತಕಗಳನ್ನು ಸಿಡಿಸಿದ್ದರು. ಆದರೂ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ನೆಚ್ಚಿನ ಶತಕವನ್ನು ಬೇರೆ ಸ್ಥಳದಲ್ಲಿ ಸಿಡಿಸಿದ್ದನ್ನು ಆರಿಸಿಕೊಂಡಿದ್ದಾರೆ. 2018ರಲ್ಲಿ ಪರ್ತ್ ಟೆಸ್ಟ್ನಲ್ಲಿ ಸಿಡಿಸಿದ್ದ ಶತಕ ತನ್ನ ನೆಚ್ಚಿನದು ಎಂದು ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಅವರು 257 ಎಸೆತಗಳಲ್ಲಿ 123 ರನ್ಗಳನ್ನು ಗಳಿಸಿದ್ದರು. ಎರಡೂ ತಂಡಗಳಿಂದ ವಿರಾಟ್ ಕೊಹ್ಲಿಯಿಂದ ಮಾತ್ರ ಏಕೈಕ ಶತಕ ಮೂಡಿಬಂದಿದ್ದು ವಿಶೇಷ.
ವಿರಾಟ್ ಕೊಹ್ಲಿಯ ನಿರ್ಣಾಯಕ ಶತಕದ ಹೊರತಾಗಿಯೂ ಭಾರತ ತಂಡ ಈ ಪಂದ್ಯದಲ್ಲಿ 146 ರನ್ಗಳಿಂದ ಸೋಲು ಅನುಭವಿಸಿತ್ತು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿಯೇ ಅತ್ಯಂತ ಕಠಿಣ ಪಿಚ್ ಇದಾಗಿತ್ತು ಎಂದು ಹೇಳಿಕೊಂಡಿದ್ದಾರೆ.
“2018-19ರ ಸರಣಿಯ ವೇಳೆ ಪರ್ತ್ನಲ್ಲಿ ಸಿಡಿಸಿದ್ದ ಶತಕ ಆಸ್ಟ್ರೇಲಿಯಾದಲ್ಲಿಯೇ ನನ್ನ ಪಾಲಿಗೆ ನೆಚ್ಚಿನದು. ಏಕೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ನಾನು ಆಡಿದ ಅತ್ಯಂತ ಕಠಿಣ ಪಿಚ್ ಅದಾಗಿತ್ತು. ಹಾಗಾಗಿ ಇಂಥಾ ಸನ್ನಿವೇಶದಲ್ಲಿ ಶತಕ ಸಿಡಿಸಿದ್ದು ಅದ್ಭುತವಾಗಿತ್ತು,” ಎಂದು ಬಿಸಿಸಿಐ ಹಂಚಿಕೊಂಡಿರುವ ವಿಡಿಯೊದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿಯ ಅಂಕಿಅಂಶಗಳು
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಅವರು ಕಾಂಗರೂ ನಾಡಿನಲ್ಲಿ ಆಡಿದ 13 ಟೆಸ್ಟ್ ಪಂದ್ಯಗಳಿಂದ 54.08ರ ಸರಾಸರಿಯಲ್ಲಿ 1352 ರನ್ಗಳನ್ನು ಕಲೆ ಹಾಕಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಆಸ್ಟ್ರೇಲಿಯಾದಲ್ಲಿ ಆರು ಶತಕಗಳು ಹಾಗೂ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. 2011-12 ಹಾಗೂ 2014-15ರ ಸಾಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಪರ ವಿರಾಟ್ ಕೊಹ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿದ್ದರು.