Tuesday, 19th November 2024

IND vs AUS: ʻಅತಿ ಹೆಚ್ಚು ರನ್‌ ಗಳಿಸುವುದು ಪಕ್ಕಾʼ-ವಿರಾಟ್‌ ಕೊಹ್ಲಿ ಬಗ್ಗೆ ಮೈಕಲ್‌ ಕ್ಲಾರ್ಕ್‌ ದೊಡ್ಡ ಭವಿಷ್ಯ!

'Virat Kohli Will Score Maximum Runs'-Michael Clarke Makes Huge Prediction Before BGT

ಪರ್ತ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮುಂಬರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಬಲ್ಲ ಬ್ಯಾಟ್ಸ್‌ಮನ್‌ ಅನ್ನು ಆಸೀಸ್‌ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಆಯ್ಕೆ ಮಾಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಲಿದ್ದಾರೆಂದು ಅವರು ದೊಡ್ಡ ಭವಿಷ್ಯ ನುಡಿದಿದ್ದಾರೆ.

ನವೆಂಬರ್‌ 22 ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯದ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಅಂದ ಹಾಗೆ ವಿರಾಟ್‌ ಕೊಹ್ಲಿ ಕಳೆದ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಅದರಲ್ಲಿಯೂ ಕಿವೀಸ್‌ ಎದುರು ಅವರು ಆಡಿದ್ದ ಆರು ಇನಿಂಗ್ಸ್‌ಗಳಿಂದ ಗಳಿಸಿದ್ದು ಕೇವಲ 93 ರನ್‌ಗಳು ಮಾತ್ರ.

ಆದರೆ, ಈ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಏಕೆಂದರೆ, ಆಸ್ಟ್ರೇಲಿಯಾದಲ್ಲಿ ಮಾಜಿ ನಾಯಕನ ಟೆಸ್ಟ್‌ ಕ್ರಿಕೆಟ್‌ ಅಂಕಿ ಅಂಶಗಳು ಉತ್ತಮವಾಗಿವೆ. ಇದರ ನಡುವೆ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ನಿಮಿತ್ತ ಮಾತನಾಡಿದ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ವಿರಾಟ್‌ ಕೊಹ್ಲಿ ಬಗ್ಗೆ ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಗರಿಷ್ಠ ಮೊತ್ತವನ್ನು ಕಲೆ ಹಾಕಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Virat Kohli: ಕೊಹ್ಲಿಯನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ; ವಾರ್ನರ್‌

ವಿರಾಟ್‌ ಕೊಹ್ಲಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಮೈಕಲ್‌ ಕ್ಲಾರ್ಕ್‌

ರೆವ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಮೈಕಲ್‌ ಕ್ಲಾರ್ಕ್‌, “ಆಸ್ಟ್ರೇಲಿಯಾದಲ್ಲಿ ವಿರಾಟ್‌ ಕೊಹ್ಲಿ ಸಾಕಷ್ಟು ಸಕ್ಸಸ್‌ ಕಂಡಿದ್ದಾರೆ. ಅವರು ಆಡಿದ್ದ 13 ಟೆಸ್ಟ್‌ ಪಂದ್ಯಗಳಿಂದ ಆರು ಶತಕಗಳನ್ನು ಸಿಡಿಸಿದ್ದಾರೆ. ಅವರು ರನ್‌ ಗಳಿಸಬೇಕೆಂಬ ಹಸಿವಿನಿಂದ ಕೂಡಿದ್ದಾರೆ ಹಾಗೂ ಇಲ್ಲಿನ ಕಂಡೀಷನ್ಸ್‌ ಅವರಿಗೆ ಸೂಕ್ತವಾಗುತ್ತದೆ. ಈ ಸರಣಿಯಲ್ಲಿ ಭಾರತ ತಂಡದ ಪರ ಕೊಹ್ಲಿ ಗರಿಷ್ಠ ಮೊತ್ತವನ್ನು ಕಲೆ ಹಾಕಲಿದ್ದಾರೆಂಬ ಭರವಸೆ ನನಗಿದೆ. ಇವರು ಉತ್ತಮ ಪ್ರದರ್ಶನ ತೋರಿದರೆ ಭಾರತ ತಂಡ ಗೆಲುವು ಸಾಧಿಸಲಿದೆ. ಮೊದಲನೇ ಟೆಸ್ಟ್‌ನಲ್ಲಿಯೇ ಅವರು ರನ್‌ ಗಳಿಸಿದರೆ, ಟೆಸ್ಟ್‌ ಸರಣಿಯುದ್ದಕ್ಕೂ ಅವರು ರನ್‌ಗಳನ್ನು ಕಲೆ ಹಾಕಲಿದ್ದಾರೆ. ಅವರು ಹೋರಾಟವನ್ನು ಇಷ್ಟಪಡುತ್ತಾರೆ. ಇಲ್ಲಿನ ವಾತಾವರಣ ಸವಾಲು ಹಾಗೂ ಪೈಪೋಟಿಯಿಂದ ಕೂಡಿದ್ದರೆ ಖಂಡಿತವಾಗಿಯೂ ವಿರಾಟ್‌ ಕೊಹ್ಲಿ ಪುಟಿದೇಳಲಿದ್ದಾರೆ,” ಎಂದು ಭವಿಷ್ಯ ನುಡಿದಿದ್ದಾರೆ.

ಕೊಹ್ಲಿಯ ಆಸ್ಟ್ರೇಲಿಯಾದಲ್ಲಿನ ಅಂಕಿಅಂಶಗಳು

ಆಸ್ಟ್ರೇಲಿಯಾದಲ್ಲಿ ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಅವರು ಇಲ್ಲಿಯತನಕ ಆಡಿದ 13 ಟೆಸ್ಟ್‌ ಪಂದ್ಯಗಳಿಂದ 54.08ರ ಸರಾಸರಿಯಲ್ಲಿ 1352 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ನಾಲ್ಕು ಅರ್ಧಶತಕಗಳು ಹಾಗೂ ಆರು ಶತಕಗಳನ್ನು ಸಿಡಿಸಿದ್ದಾರೆ. ಆದರೆ, ಪ್ರಸಕ್ತ ವರ್ಷದಲ್ಲಿ ವಿರಾಟ್‌ ಕೊಹ್ಲಿಯ ಎಲ್ಲಾ ಸ್ವರೂಪದ ಅಂಕಿಅಂಶಗಳು ಅಷ್ಟೊಂದು ಉತ್ತಮವಾಗಿಲ್ಲ. ಈ ವರ್ಷ ಆಡಿದ 25 ಇನಿಂಗ್ಸ್‌ಗಳಿಂದ ಕೇವಲ ಎರಡು ಅರ್ಧಶತಕಗಳೊಂದಿಗೆ ಕೇವಲ 488 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಮೂಡಿಬಂದಿತ್ತು.

ಪರ್ತ್‌ ಟೆಸ್ಟ್‌ನಲ್ಲಿ ಕೊಹ್ಲಿ ಮೇಲೆ ಹೆಚ್ಚಿನ ಜವಾಬ್ದಾರಿ

ನಾಯಕ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ವಿರಾಟ್‌ ಕೊಹ್ಲಿಗೆ ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಜವಾಬ್ದಾರಿ ಹೆಚ್ಚಿದೆ. ಇನ್ನು ಹೆಬ್ಬೆರಳು ಗಾಯದ ಸಮಸ್ಯೆಯಿಂದ ಶುಭಮನ್‌ ಗಿಲ್‌ ಕೂಡ ಆಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌ ಸೇರಿದಂತೆ ಹಿರಿಯ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ.