ಬ್ರಿಸ್ಬೇನ್: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಫಿಟ್ನೆಸ್ ಕುರಿತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸ್ಪಷ್ಟನೆ ನೀಡುವ ಸಮಯ ಇದೀಗ ಬಂದಿದೆ. ಶಮಿ ಫಿಟ್ನೆಸ್ ಬಗ್ಗೆ ಖಚಿತವಾಗುವವರೆಗೆ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (IND vs AUS) ವೇಗದ ಬೌಲರ್ ಅನ್ನು ಕರೆಸಿಕೊಂಡು ಅಪಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಒತ್ತಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಮೊಹಮ್ಮದ್ ಶಮಿ ಗಾಯದಿಂದ ಕಮ್‌ಬ್ಯಾಕ್ ಮಾಡಿದ್ದರು ಮತ್ತು ಶನಿವಾರದಿಂದ ಪ್ರಾರಂಭವಾಗುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಬಂಗಾಳ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೊಹಮ್ಮದ್ ಶಮಿ ಬಗ್ಗೆ ಎನ್‌ಸಿಎ ಮಾಹಿತಿ ನೀಡಬೇಕು
ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಯಾರಾದರೂ ಒಬ್ಬರು ಅವರ (ಮೊಹಮ್ಮದ್ ಶಮಿ) ಬಗ್ಗೆ ಮಾತನಾಡುವ ಸಮಯ ಬಂದಿದೆ. ಶಮಿ ಸದ್ಯ ನಮ್ಮ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಅಲ್ಲಿ ಅವರು ಪುನಶ್ಚೇತನ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಹಾಗಾಗಿ ಎನ್‌ಸಿಎನಲ್ಲಿರುವವರೇ ಯಾರಾದರೂ ನಮಗೆ ಮಾಹಿತಿ ನೀಡಬೇಕಾಗಿದೆ,” ಎಂದು ತಿಳಿಸಿದ್ದಾರೆ.
ಶಮಿ ಕಾಲಿನ ಬಗ್ಗೆ ದೂರುಗಳಿವೆ: ರೋಹಿತ್ ಶರ್ಮಾ
“ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವಾಗ ಶಮಿ ಅವರ ಮೊಣಕಾಲುಗಳು ಊದಿಕೊಂಡಿದ್ದವು ಎಂಬ ಬಗ್ಗೆ ದೂರುಗಳಿವೆ. ಅವರು ತವರಿನಲ್ಲಿ ಸಾಕಷ್ಟು ಕ್ರಿಕೆಟ್ ಆಡುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಅವರ ಮೊಣಕಾಲಿನ ಬಗ್ಗೆಯೂ ಕೆಲವು ದೂರುಗಳಿವೆ. ಹಾಗಾಗಿ ಆಟಗಾರರು ಇಲ್ಲಿಗೆ ಬಂದು ಪಂದ್ಯದ ಮಧ್ಯದಲ್ಲಿ ಹೊರಗೆ ಹೋಗುವುದನ್ನು ನಾವು ಬಯಸುವುದಿಲ್ಲ. ಗಾಯ ಸಂಭವಿಸಿದಾಗ ಏನಾಗುತ್ತದೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ ನಾವು ಅಂತಹ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ನಾವು ಶೇ 100 ಅಥವಾ ಶೇ 200 ರಷ್ಟು ಫಿಟ್ನೆಸ್ ಖಚಿತವಾಗಿದ್ದರೆ ನಾವು ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ,” ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
Captain Rohit Sharma talking about Mohammed Shami and his return. 🇮🇳
— Tanuj Singh (@ImTanujSingh) December 8, 2024
– INDIA NEEDS SHAMI IN BGT…!!!! pic.twitter.com/hkV7reBovg
ಕಳೆದ ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಳಿಕ ಮೊಹಮ್ಮದ್ ಶಮಿ ಅವರು ಸೆಂಟರ್ ಆಫ್ ಎಕ್ಸಲೆನ್ಸ್‌ನ ಅಡಿಯಲ್ಲಿದ್ದಾರೆ. ಅವರು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಗಳಲ್ಲಿ ಕಮ್‌ಬ್ಯಾಕ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವರು ಕಮ್‌ಬ್ಯಾಕ್ ಮಾಡಿರಲಿಲ್ಲ. ಆದರೆ, ಆಗಸ್ಟ್‌ನಲ್ಲಿ ಅವರು ದೇಶಿ ಕ್ರಿಕೆಟ್‌ನಲ್ಲಿ ಬೌಲ್ ಮಾಡಿದ್ದರು.
ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ್ದ ಬಳಿಕ ಬಂಗಾಳ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಇತ್ತೀಚೆಗೆ ಮುಗಿದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿಯೂ ಕಾಣಿಸಿಕೊಂಡಿದ್ದರು. ಅಂದ ಹಾಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡಬಹುದೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ.
ಈ ಸುದ್ದಿಯನ್ನು ಓದಿ: IND vs AUS: ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಬೇಕೆಂದ ಪೂಜಾರ!