Thursday, 12th December 2024

IND vs AUS: ‘ಮಿಚೆಲ್‌ ಸ್ಟಾರ್ಕ್‌ರ ಅಡಿಲೇಡ್‌ ಟೆಸ್ಟ್‌ ಸಕ್ಸಸ್‌ಗೆ ಯಶಸ್ವಿ ಜೈಸ್ವಾಲ್‌ ಕಾರಣ’-ರಿಕಿ ಪಾಂಟಿಂಗ್!

Ricky Ponting Points Out yashasvi jaiswal For Riling Up Aussie Speedster

ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್ ಮಾಡಿದ್ದ ಹಾಸ್ಯದ ಕಾಮೆಂಟ್ ಮಿಚೆಲ್ ಸ್ಟಾರ್ಕ್‌ಗೆ ಎರಡನೇ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರೇರೇಪಿಸಿತು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಪರ್ತ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 161 ರನ್‌ಗಳನ್ನು ಕಲೆ ಹಾಕಿದ್ದರು. ತಮ್ಮ ಬ್ಯಾಟಿಂಗ್‌ ಸಮಯದಲ್ಲಿ ಮಿಚೆಲ್ ಸ್ಟಾರ್ಕ್‌ಗೆ ‘ನೀವು ತುಂಬಾ ನಿಧಾನವಾಗಿ ಬೌಲ್‌ ಮಾಡುತ್ತಿದ್ದೀರಿ’ ಎಂದು ಯುಶಸ್ವಿ ಜೈಸ್ವಾಲ್‌ ತಮಾಷೆ ಮಾಡಿದ್ದರು. ಈ ವೇಳೆ ಸ್ಟಾರ್ಕ್‌ ನಗುತ್ತಾ ಹಿಂತಿರುಗಿದ್ದರು. ಆದರೆ ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅವರನ್ನು ಮೊದಲ ಎಸೆತದಲ್ಲಿ ಡಕ್‌ಔಟ್ ಮಾಡುವ ಮೂಲಕ ಸ್ಟಾರ್ಕ್‌ ಪ್ರತಿಕ್ರಿಯೆ ನೀಡಿದ್ದರು.

ಮಿಚೆಲ್‌ ಸ್ಟಾರ್ಕ್‌ ಯಶಸ್ಸಿಗೆ ಜೈಸ್ವಾಲ್‌ ಕಾರಣ

ಐಸಿಸಿ ರಿವ್ಯೂವ್‌ನಲ್ಲಿ ಈ ಘಟನೆಯನ್ನು ಚರ್ಚಿಸುವಾಗ, ಜೈಸ್ವಾಲ್ ಅವರ ಕಾಮೆಂಟ್ ಸ್ಟಾರ್ಕ್‌ಗೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರೇರೇಪಿಸಿತು ಎಂದು ಹೇಳಿದರು. “ಮಿಚೆಲ್ ಸ್ಟಾರ್ಕ್ ತುಂಬಾ ಶಾಂತ ಸ್ವಭಾವದವರು. ಅವರು ಹೆಚ್ಚು ಗಾಬರಿಯಾಗುವುದಿಲ್ಲ, ಮತ್ತು ಬ್ಯಾಟ್ಸ್‌ಮನ್ ಏನಾದರೂ ಹೇಳಿದರೂ, ಅವರು ಆಗಾಗ್ಗೆ ನಗುಮುಖದಿಂದಲೇ ಪ್ರತಿಕ್ರಿಯಿಸುತ್ತಾರೆ. ಆದರೆ ಅವರ ನಗು ಅವರೊಳಗಿನ ಬೆಂಕಿಯನ್ನು ಮರೆಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಅಡಿಲೇಡ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ,” ಎಂದು ತಿಳಿಸಿದ್ದಾರೆ.

34ನೇ ವಯಸ್ಸಿನ ಮಿಚೆಲ್ ಸ್ಟಾರ್ಕ್ ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರು ಎಲ್ಲಾ ಸ್ವರೂಪಗಳಲ್ಲಿ 692 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಎರಡು ಐಸಿಸಿ ಏಕದಿನ ವಿಶ್ವಕಪ್‌ಗಳು (2015 ಮತ್ತು 2023), ಒಂದು ಟಿ20 ವಿಶ್ವಕಪ್ (2021), ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2023) ಸೇರಿದಂತೆ ಆಸ್ಟ್ರೇಲಿಯಾದ ಐಸಿಸಿ ಟ್ರೋಫಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಮಿಚೆಲ್‌ ಸ್ಟಾರ್ಕ್‌ ಮೂರೂ ಸ್ವರೂಪದ ಶ್ರೇಷ್ಠ ವೇಗಿ

ರಿಕಿ ಪಾಂಟಿಂಗ್ ಅವರು ಸ್ಟಾರ್ಕ್ ಅವರನ್ನು ಹೊಗಳಿದರು ಮತ್ತು ಅವರು ಪ್ರತಿಯೊಂದು ಸ್ವರೂಪಕ್ಕೆ ಹೇಗೆ ಹೊಂದಿಕೊಂಡಿದ್ದಾರೆ ಎಂಬುದು ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.

“ಕಳೆದ ಕೆಲವು ವರ್ಷಗಳಲ್ಲಿ ಅವರು ಬಹುಶಃ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರ ಬೌಲಿಂಗ್‌ನಲ್ಲಿ ಈಗ ಹೆಚ್ಚು ಸ್ಥಿರತೆ ಇದ್ದು, ಅವರ ವೇಗ ಕೂಡ ಮೊದಲಿನಂತೆಯೇ ಇದೆ. ಅವರು ಈ ಹಿಂದೆ 150 ಕಿಮೀ/ಗಂಟೆಗಿಂತ ಹೆಚ್ಚು ವೇಗದಲ್ಲಿ ಬೌಲ್‌ ಮಾಡಬಲ್ಲರು ಮತ್ತು ಈಗಲೂ ಅವರು 140-145 ಕಿಮೀ/ಗಂ ವೇಗದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ,” ಎಂದು ಶ್ಲಾಘಿಸಿದ್ದಾರೆ.

“ಪರ್ತ್ ಮತ್ತು ಅಡಿಲೇಡ್‌ನಲ್ಲಿ ಅವರ ಮೊದಲ ಸ್ಪೆಲ್‌ನಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ವಿಶೇಷವಾಗಿ ಅಡಿಲೇಡ್‌ನಲ್ಲಿ ಪಿಂಕ್ ಚೆಂಡಿನೊಂದಿಗೆ ಅವರ ಬೌಲಿಂಗ್ ಅದ್ಭುತವಾಗಿತ್ತು. ಪಿಂಕ್‌ ಬಾಲ್‌ನೊಂದಿಗೆ ಅವರ ಯಶಸ್ಸಿಗೆ ಒಂದು ಕಾರಣವೆಂದರೆ ಗುಲಾಬಿ ಚೆಂಡು ಬಿಳಿ ಚೆಂಡಿನಂತೆ ವರ್ತಿಸುತ್ತದೆ. ಮತ್ತು ಬಿಳಿ ಚೆಂಡಿನೊಂದಿಗೆ ಸ್ಟಾರ್ಕ್ ಅವರ ದಾಖಲೆ ಎಷ್ಟು ಅದ್ಭುತವಾಗಿದೆ ಎಂದು ನಮಗೆ ತಿಳಿದಿದೆ. ಇವರ ಯಶಸ್ಸಿಗೆ ಇದೇ ಕಾರಣವಾಗಿರಬಹುದು,” ಎಂದು ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: WTC Standings: ಪಿಂಕ್‌ ಟೆಸ್ಟ್‌ ಸೋಲಿನ ಬೆನ್ನಲ್ಲೆ ಮೂರನೇ ಸ್ಥಾನಕ್ಕೆ ಕುಸಿದ ಭಾರತ!