Wednesday, 18th December 2024

IND vs AUS: ʻನಿಮ್ಮ ನಿರ್ಧಾರದಿಂದ ಭಾವುಕನಾಗಿದ್ದೇನೆʼ-ಅಶ್ವಿನ್‌ಗೆ ಕೊಹ್ಲಿ ಭಾವುಕ ಸಂದೇಶ!

IND vs AUS: 'When you told me, it made me emotional'-Virat Kohli reacts to R Ashwin retirement

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ಹಠಾತ್‌ ವಿದಾಯ ಹೇಳಿದ ಭಾರತ ತಂಡದ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ (IND vs AUS) ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ನಿಮ್ಮ ನಿವೃತ್ತಿ ನಿರ್ಧಾರದಿಂದ ಭಾವುಕನಾಗಿದ್ದೇನೆಂದು ಕಿಂಗ್‌ ಕೊಹ್ಲಿ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿದ್ದು, ಈ ವೇಳೆ ಟಿವಿ ಪರದೆ ಮೇಲೆ ಒಂದು ದೃಶ್ಯ ಕಂಡು ಬಂದಿತು. ಕ್ರಿಕೆಟ್‌ನ ಅತ್ಯಂತ ಬುದ್ಧಿವಂತ ಆಟಗಾರರಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ಅವರ ಕಣ್ಣಲ್ಲಿ ನೀರು ತುಂಬಿತ್ತು. ವಿರಾಟ್ ಕೊಹ್ಲಿ ಅವರ ಪಕ್ಕದಲ್ಲಿ ಕುಳಿತಿದ್ದರು. ಆಗಾಗ ಜಾಲಿ ಮೂಡ್‌ನಲ್ಲಿರುತ್ತಿದ್ದ ವಿರಾಟ್‌ ಕೊಹ್ಲಿ ಜೊತೆ ಮಾತನಾಡುತ್ತಾ ಅಶ್ವಿನ್ ತಮ್ಮ ಕಣ್ಣುಗಳನ್ನು ಒರೆಸುತ್ತಿದ್ದರು ಹಾಗೂ ಅವರು ಅಳುತ್ತಿದ್ದರು.

ಈ ವೇಳೆ ವಿರಾಟ್ ಕೊಹ್ಲಿ ಅವರನ್ನು ಸಾಂತ್ವನ ಮಾಡುತ್ತಿದ್ದರು ಮತ್ತು ಅವರನ್ನು ತಬ್ಬಿಕೊಳ್ಳುತ್ತಿದ್ದರು. ಈ ವಿಡಿಯೋ ಹೊರಬಿದ್ದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಪಡೆಯಬಹುದೆಂದು ಎಲ್ಲರೂ ಊಹಿಸಿದ್ದರು ಹಾಗೂ ಚರ್ಚೆಗಳು ಶುರುವಾಗಿದ್ದವು. ಅದರಂತೆ ಮೂರನೇ ಟೆಸ್ಟ್‌ ಪಂದ್ಯದ ಐದನೇ ದಿನ ಮಳೆಯ ಕಾರಣ ಭಾರತ ತಂಡದ ದ್ವಿತೀಯ ಇನಿಂಗ್ಸ್‌ ಅನ್ನು ಮುಂದುವರಿಸಲು ಸಾಧ್ಯವಾಗದೆ ಅಂಪೈರ್‌ಗಳು ಡ್ರಾ ಘೋಷಿಸಿದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ನಾಯಕ ರೋಹಿತ್‌ ಶರ್ಮಾ ಜೊತೆ ಕಾಣಿಸಿಕೊಂಡಿದ್ದ ರವಿಚಂದ್ರನ್‌ ಅಶ್ವಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪಡೆಯುವುದಾಗಿ ಬಹಿರಂಗಪಡಿಸಿದರು. ಆ ಮೂಲಕ ಕ್ರಿಕೆಟ್‌ ಜಗತ್ತಿಗೆ ಶಾಕ್‌ ನೀಡಿದ್ದರು. ನಂತರ ತಂಡದ ಡ್ರೆಸ್ಸಿಂಗ್‌ ರೂಂನಲ್ಲಿಯೂ ಮಾತನಾಡಿದ್ದ ಆರ್‌ ಅಶ್ವಿನ್‌ ತಮ್ಮ ಸಹ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ವಿಶೇಷ ಪದಗಳಿಂದ ಗುಣಗಾನ ಮಾಡಿದ್ದರು.

ಆರ್‌ ಅಶ್ವಿನ್‌ಗೆ ವಿರಾಟ್‌ ಕೊಹ್ಲಿ ಭಾವುಕ ಸಂದೇಶ

ಆರ್‌ ಅಶ್ವಿನ್‌ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಾತನಾಡಿದ ಬಳಿಕ ಭಾರತ ತಂಡದ ಮಾಜಿ ನಾಯಕ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಸಹ ಆಟಗಾರನಿಗೆ ಭಾವಕನಾತ್ಮಕ ಸಂದೇಶವನ್ನು ಬರೆದಿದ್ದಾರೆ.

“ನಾನು ನಿಮ್ಮೊಂದಿಗೆ 14 ವರ್ಷಗಳಿಂದ ಆಡಿದ್ದೇನೆ ಮತ್ತು ನೀವು ಇಂದು (ಬುಧವಾರ) ನಿವೃತ್ತರಾಗುತ್ತಿದ್ದೀರಿ ಎಂದು ನನಗೆ ಹೇಳಿದಾಗ, ಅದು ನನ್ನನ್ನು ಸ್ವಲ್ಪ ಭಾವುಕನನ್ನಾಗಿಸಿತು ಮತ್ತು ಹಲವು ವರ್ಷಗಳಲ್ಲಿ ಒಟ್ಟಿಗೆ ಆಡಿದ ನೆನಪುಗಳು ನನ್ನ ಮುಂದೆ ಹಾದು ಹೋದವು. ನಿಮ್ಮೊಂದಿಗಿನ ಪ್ರಯಾಣದ ಪ್ರತಿಯೊಂದು ಕ್ಷಣವನ್ನು ನಾನು ಆನಂದಿಸಿದ್ದೇನೆ. ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೌಶಲ ಮತ್ತು ಪಂದ್ಯವನ್ನು ಗೆದ್ದು ಕೊಡುವ ನಿಮ್ಮ ಕೊಡುಗೆಗಳು ಯಾವುದಕ್ಕೂ ಕಡಿಮೆ ಇಲ್ಲ. ನೀವು ಯಾವಾಗಲೂ ಭಾರತೀಯ ಕ್ರಿಕೆಟ್‌ನ ದಂತಕಥೆಯಾಗಿ ನೆನಪಿನಲ್ಲಿ ಉಳಿಯುತ್ತೀರಿ. ನಿಮ್ಮ ಕುಟುಂಬದೊಂದಿಗೆ ನಿಮ್ಮ ಜೀವನ ಉತ್ತಮವಾಗಿರಲಿ ಹಾಗೂ ನೀವು ಮುಂದೆ ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಒಳ್ಳೆಯದು ಮಾಡಲಿ ಹಾಗೂ ಇದನ್ನು ಬಿಟ್ಟು ಬೇರೆ ಏನನ್ನೂ ನಾನು ಬಯಸುವುದಿಲ್ಲ. ನಿಮಗೆ ಮತ್ತು ನಿಮ್ಮ ಆಪ್ತರಿಗೆ ಅಪಾರವಾದ ಗೌರವ ಮತ್ತು ಪ್ರೀತಿಯಿಂದ. ಎಲ್ಲದಕ್ಕೂ ಧನ್ಯವಾದಗಳು ಗೆಳೆಯ. ನಿಮಗೆ ಹಾಗೂ ನಿಮ್ಮ ಆಪ್ತಬಳಗದ ಮೇಲೆ ಅಪಾರವಾದ ಗೌರವ ಹಾಗೂ ಪ್ರೀತಿ ಇದೆ. ನೀವು ನೀಡಿರುವ ಎಲ್ಲದಕ್ಕೂ ಧನ್ಯವಾದಗಳು,” ಎಂದು ತಾವು ಹಂಚಿಕೊಂಡಿರುವ ಅಶ್ವಿನ್‌ ಜತೆಗಿನ ಫೋಟೋಗೆ ಈ ರೀತಿಯ ಶೀರ್ಷಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಓದಿ: R Ashwin Retires: ಆರ್‌.ಅಶ್ವಿನ್‌ ಕ್ರಿಕೆಟ್‌ ಸಾಧನೆಯ ಇಣುಕು ನೋಟ