ನವದೆಹಲಿ: ಮುಂಬರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯಲ್ಲಿ ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಎದುರಿಸಲು ತಾವು ರೂಪಿಸಿರುವ ಬ್ಯಾಟಿಂಗ್ ಗೇಮ್ ಪ್ಲ್ಯಾನ್ ಏನೆಂಬುದನ್ನು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಬಹಿರಂಗಪಡಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ನವೆಂಬರ್ 22 ರಂದು ಆರಂಭವಾಗಲಿದೆ. ಮೊದಲನೇ ಟೆಸ್ಟ್ ಪಂದ್ಯ ಪರ್ತ್‌ನ ಅಪ್ಟಸ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ತಯಾರಿಯನ್ನು ನಡೆಸುತ್ತಿವೆ. ಆಸ್ಟ್ರೇಲಿಯಾ ಕಂಡೀಷನ್ಸ್ ವೇಗದ ಬೌಲರ್‌ಗಳಿಗೆ ನೆರವು ನೀಡಲಿವೆ ಹಾಗೂ ಎರಡೂ ತಂಡಗಳಲ್ಲಿಯೂ ಅಪಾಯಕಾರಿ ಫಾಸ್ಟ್ ಬೌಲರ್‌ಗಳಿದ್ದಾರೆ. ಅಂದ ಹಾಗೆ ಭಾರತದ ಜಸ್‌ಪ್ರೀತ್ ಬುಮ್ರಾ ಬಗ್ಗೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಆತಂಕವಿದೆ. ಈ ಬಗ್ಗೆಆಸೀಸ್ ಆರಂಭಿಕ ಉಸ್ಮಾನ್ ಖವಾಜ ಮಾತನಾಡಿದ್ದಾರೆ.
IND vs AUS: ರೋಹಿತ್ ಅಲಭ್ಯರಾದರೆ ಬುಮ್ರಾ ನಾಯಕ; ಕೋಚ್ ಗಂಭೀರ್
ಜಸ್‌ಪ್ರೀತ್ ಬುಮ್ರಾಗೆ ಗೇಮ್ ಪ್ಲ್ಯಾನ್ ತಿಳಿಸಿದ ಉಸ್ಮಾನ್ ಖವಾಜ
ಫಾಕ್ಸ್ ಕ್ರಿಕೆಟ್ ಸಂದರ್ಶನದಲ್ಲಿ ಮಾತನಾಡಿದ ಉಸ್ಮಾನ್ ಖವಾಜ, “ನೀವು ಮೊದಲನೇ ಬಾರಿ ಅವರನ್ನು (ಜಸ್‌ಪ್ರೀತ್ ಬುಮ್ರಾ) ಎದುರಿಸಿದಾಗ, ಅವರ ಆಕ್ಷನ್ ತುಂಬಾ ಮುಖ್ಯವಾಗುತ್ತದೆ. ಬೇರೆ ಬೌಲರ್‌ಗಳಿಗೆ ಹೋಲಿಕೆ ಮಾಡಿದರೆ ಅವರ ಆಕ್ಷನ್ ಮತ್ತು ಚೆಂಡನ್ನು ರಿಲೀಸ್ ಮಾಡುವ ವಿಧಾನ ತುಂಬಾ ವಿಭಿನ್ನವಾಗಿದೆ. ಒಮ್ಮೆ ಅವರಿಗೆ ಆಡಿದರೆ, ನಂತರ ಅದು ಸರಿಯಾಗುತ್ತದೆ. ಅಂದ ಹಾಗೆ ನಾನು ಅವರ ವಿರುದ್ದ ತುಂಬಾ ಸಲ ಆಡಿದ್ದೇನೆ. ಹಾಗಾಗಿ ಅವರು ನನ್ನನ್ನು ಮೊದಲನೇ ಎಸೆತದಲ್ಲಿಯೇ ಔಟ್ ಮಾಡುತ್ತಾರೆಂದು ನಾನು ಹೇಳುವುದಿಲ್ಲ. ಅಂದರೆ ಯಾರು ಬೇಕಾದರೂ ಆಡಬಹುದು,” ಎಂದು ಹೇಳಿದ್ದಾರೆ.
“ನಾನು ಕೇವಲ ಜಸ್‌ಪ್ರೀತ್ ಬುಮ್ರಾ ಬಗ್ಗೆ ಯೋಚಿಸುತ್ತಿಲ್ಲ. ನೀವು ಯಾವುದರ ಬಗ್ಗೆ ಚಿಂತಿಸುತ್ತಿದ್ದೀರಿ ಎಂದು ನನ್ನನ್ನು ಕೇಳಿದರೆ…ಅವರು ನನ್ನನ್ನು ಎಲ್ಲಿ ಔಟ್ ಮಾಡುತ್ತಾರೆಂದು ಮಾತ್ರ ಚಿಂತಿಸುತ್ತಿಲ್ಲ. ಅವರ ವಿರುದ್ಧ ಎಲ್ಲಿ ರನ್ ಹೊಡೆಯಬೇಕೆಂಬುದರ ಬಗ್ಗೆ ಚಿಂತಿಸುತ್ತಿದ್ದೇನೆ. ಎಲ್ಲಾ ಒಳ್ಳೆಯ ಬ್ಯಾಟ್ಸ್‌ಮನ್‌ಗಳು ಕೂಡ ಇದಕ್ಕೆ ಹೇಳುತ್ತಾರೆಂದು ನಾನು ಭಾವಿಸುತ್ತೇನೆ. ಒಳ್ಳೆಯ ಚೆಂಡು ನಿಮಗೆ ಎದುರಾದಾಗ ನೀವು ಅದನ್ನು ಗೌರವಿಸಬೇಕು. ಟೆಸ್ಟ್ ಕ್ರಿಕೆಟ್ ಎಂದರೆ ಇದೆ,” ಎಂದು ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ.
ICC Test Rankings: ಅಗ್ರಸ್ಥಾನ ಕಳೆದುಕೊಂಡ ಜಸ್‌ಪ್ರೀತ್ ಬುಮ್ರಾ
ಮೊಹಮ್ಮದ್ ಸಿರಾಜ್‌ಗೆ ಖವಾಜ ಶ್ಲಾಘನೆ
“ಪ್ರತಿಯೊಬ್ಬರೂ ಜಸ್‌ಪ್ರೀತ್ ಬುಮ್ರಾ ಬಗ್ಗೆ ಮಾತನಾಡುತ್ತಾರೆ. ಆದರೆ, ಭಾರತ ತಂಡದಲ್ಲಿ ಸಾಕಷ್ಟು ಒಳ್ಳೆಯ ಬೌಲರ್‌ಗಳು ಇದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಒಳ್ಳೆಯ ಬೌಲರ್ ಎಂದು ನಾನು ಭಾವಿಸುತ್ತೇನೆ. ಎಡಗೈ ಹಾಗೂ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬೌಲರ್,” ಎಂದು ಉಸ್ಮಾನ್ ಖವಾಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.