Thursday, 21st November 2024

IND vs AUS: ವಿಶ್ವ ದಾಖಲೆ ಸನಿಹ ಜೈಸ್ವಾಲ್‌; 2 ಸಿಕ್ಸರ್‌ ಅಗತ್ಯ

Yashasvi Jaiswal

ಪರ್ತ್‌: ಟೀಮ್‌ ಇಂಡಿಯಾದ ಉದಯೋನ್ಮುಖ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashasvi Jaiswal) ನಾಳೆ ಪರ್ತ್‌ನಲ್ಲಿ ಆರಂಭವಾಗುವ ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಜೈಸ್ವಾಲ್‌ ಈ ಪಂದ್ಯದಲ್ಲಿ ಕೇವಲ 2 ಸಿಕ್ಸರ್‌ ಬಾರಿಸಿದರೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಪ್ರಸಕ್ತ ಟೆಸ್ಟ್ ಕ್ರಿಕೆಟ್‌ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನ್ಯೂಜಿಲ್ಯಾಂಡ್‌ ತಂಡದ ಮಾಜಿ ಸ್ಫೋಟಕ ಬ್ಯಾಟರ್‌, ಬ್ರೆಂಡನ್ ಮೆಕಲಮ್(Brendon McCullum) ಹೆಸರಿನಲ್ಲಿದೆ. ಮೆಕಲಮ್ 2014 ರಲ್ಲಿ 9 ಟೆಸ್ಟ್‌ ಪಂದ್ಯಗಳಿಂದ 33 ಸಿಕ್ಸರ್‌ ಬಾರಿಸಿದ್ದರು. ಸದ್ಯ ಜೈಸ್ವಾಲ್‌ 32 ಸಿಕ್ಸರ್‌ ಬಾರಿಸಿದ್ದಾರೆ. ಇನ್ನೆರಡು ಸಿಕ್ಸರ್‌ ಬಾರಿಸಿದರೆ ಮೆಕಲಮ್‌ ದಾಖಲೆ ಪತನಗೊಳ್ಳಲಿದೆ.

ಏತನ್ಮಧ್ಯೆ, 2024 ರಲ್ಲಿ 1000+ ಟೆಸ್ಟ್ ರನ್ ಗಳಿಸಿದ ಇಂಗ್ಲೆಂಡ್‌ ಬ್ಯಾಟರ್‌ ಜೋ ರೂಟ್ ಹೊರತುಪಡಿಸಿದರೆ ಈ ಪಟ್ಟಿಯಲ್ಲಿರುವ ಏಕೈಕ ಆಟಗಾರನೂ ಹೌದು. ಜೈಸ್ವಾಲ್ 1119* ರನ್‌ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಆಸೀಸ್‌ ಸರಣಿಯಲ್ಲಿ ಇನ್ನೂ 219 ರನ್ ಗಳಿಸಿದರೆ, ಈ ವರ್ಷ ಟೆಸ್ಟ್‌ನಲ್ಲಿ ಅಗ್ರ ರನ್ ಗಳಿಸಿದ ಆಟಗಾರರಾಗುತ್ತಾರೆ. ಜೈಸ್ವಾಲ್‌ ಆಸೀಸ್‌ ನೆಲದಲ್ಲಿ ಆಡುತ್ತಿರುವ ಮೊದಲ ಟೆಸ್ಟ್‌ ಸರಣಿ ಇದಾಗಿದೆ. ಹೀಗಾಗಿ ಅವರ ಬ್ಯಾಟಿಂಗ್‌ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಈ ಹಿಂದೆ ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ IND vs AUS: ಮೊದಲ ಟೆಸ್ಟ್‌ಗೆ ಆಡುವ ಬಳಗ ಅಂತಿಮ; ನಾಯಕ ಬುಮ್ರಾ

ತವರಿನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯಲ್ಲಿ 3-0 ಅಂತರದ ಸೋಲು ಕಂಡಿರುವ ಕಾರಣ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ತಲುಪಲು ಭಾರತಕ್ಕೆ ಇದು ಮಸ್ಟ್‌ ವಿನ್‌ ಸರಣಿಯಾಗಿದೆ. ಆಸ್ಟ್ರೇಲಿಯಾವನ್ನು 4-1 ಅಂತರದಿಂದ ಸೋಲಿಸಬೇಕಾಗಿದೆ ಅಥವಾ 3-2 ಅಂತರದ ಗೆಲುವು ಅಗತ್ಯ. ಸದ್ಯ ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.