ಪರ್ತ್: ವಾಕಾ ಮೈದಾನದಲ್ಲಿ ಭಾರತ ಎ ತಂಡದ ವಿರುದ್ಧ ತ್ರಿದಿನ ಅಭ್ಯಾಸ ಪಂದ್ಯನ್ನಾಡಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸಜ್ಜಾಗಿರುವ ಟೀಮ್ ಇಂಡಿಯಾ(IND vs AUS) ಇಂದಿನಿಂದ ಪರ್ತ್ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದೆ. ಮೊದಲ ದಿನ(India first training) ಸಂಪೂರ್ಣವಾಗಿ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಮಾರ್ಗದರ್ಶನಲ್ಲಿ ತರಬೇತಿ ಪಡೆಯಿತು.
ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳಿಗೆ ಅನುಗುಣವಾಗಿ ಭಾರತೀಯ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಸ್ಲಿಪ್ನಲ್ಲಿ ಕ್ಯಾಚಿಂಗ್ ಅಭ್ಯಾಸ ನಡೆಸಿದರು. ಕೊಹ್ಲಿ ಮತ್ತು ಪಡಿಕ್ಕಲ್ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಫೋಟೊಗಳು ವೈರಲ್ ಆಗಿದೆ.
ಪಿಚ್ ಸಂಪೂರ್ಣ ಬೌನ್ಸಿಯಾಗಿರುವ ಕಾರಣ ಸ್ಲಿಪ್ನಲ್ಲಿ ಕ್ಯಾಚ್ ಅವಕಾಶ ಹೆಚ್ಚು. ಹೀಗಾಗಿ ಭಾರತೀಯ ಆಟಗಾರರು ಮೊದಲ ದಿನದ ಅಭ್ಯಾಸವನ್ನು ಕೇವಲ ಕ್ಯಾಚಿಂಗ್ ಮತ್ತು ಫೀಲ್ಡಿಂಗ್ ಸೀಮಿತಗೊಳಿಸಿದರು. ನಾಳೆಯಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಕಡೆ ಗಮನಹರಿಸಲಿದ್ದಾರೆ.
ಭಾರತ ಎ ತಂಡದ ಸದಸ್ಯನಾಗಿದ್ದ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಮೊದಲ ಪಂದ್ಯಕ್ಕೆ ಅವಕಾಶ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಅವರನ್ನು ಆಡಿಸುವ ನಿಟ್ಟಿನಲ್ಲಿಯೇ ಹೆಚ್ಚುವರಿ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ಮಾಡಿಸಿದಂತಿದೆ. ಶುಭಮಾನ್ ಗಿಲ್ ಎಡಗೈ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿರುವುದರಿಂದ ಗಿಲ್ ಮೊದಲ ಪಂದ್ಯದಿಂದ ಹೊರಗುಳಿಯಬಹುದು. ಪಡಿಕ್ಕಲ್ ವನ್ಡೌನ್ ಆಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಆಸ್ಟ್ರೆಲಿಯಾ ಎ ವಿರುದ್ಧದ 2 ಚತುರ್ದಿನ ಪಂದ್ಯಗಳ 4 ಇನಿಂಗ್ಸ್ಗಳಲ್ಲಿ ಪಡಿಕ್ಕಲ್ 36, 88, 26 ಮತ್ತು 1 ರನ್ ಗಳಿಸಿದ್ದರು. ಇದುವರೆಗೆ ಭಾರತ ಪರ ಏಕೈಕ ಟೆಸ್ಟ್ ಆಡಿರುವ 24 ವರ್ಷದ ಪಡಿಕ್ಕಲ್, 65 ರನ್ ಬಾರಿಸಿ ಮಿಂಚಿದ್ದರು. ಪಡಿಕ್ಕಲ್ ಭಾರತ ಪರ ಕೇವಲ ಒಂದು ಟೆಸ್ಟ್ ಆಡಿದ ಅನುಭವ ಹೊಂದಿದ್ದಾರೆ. ಇದೇ ವರ್ಷ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಮೂಲಕ ಪಡಿಕ್ಕಲ್ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಆ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದ್ದರು. ಒಟ್ಟು 65 ರನ್ ಗಳಿಸಿದ್ದರು. ಒಂದೊಮ್ಮೆ ಅವರು ಪರ್ತ್ ಟೆಸ್ಟ್ನಲ್ಲಿ ಆಡಿದರೆ ಆಸೀಸ್ ನೆಲದಲ್ಲಿ ಅವರಿಗೆ ಮೊದಲ ಪಂದ್ಯವಾಗಲಿದೆ.
ಯುವ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಈ ಮೂಲಕ 4ನೇ ವೇಗದ ಬೌಲರ್ ಆಗಿ ಅವರನ್ನು ಬಳಸಿಕೊಳ್ಳಲು ಭಾರತ ಯೋಜಿಸಿದೆ. 21 ವರ್ಷದ ನಿತೀಶ್ ಆಂಧ್ರ ಪರ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಜತೆಗೆ 56 ವಿಕೆಟ್ ಕಬಳಿಸಿದ್ದಾರೆ.