ಗ್ವಾಲಿಯರ್: ಬಾಂಗ್ಲಾದೇಶ ವಿರುದ್ಧದ ಟಿ20(IND vs BAN 1st T20) ಸರಣಿಯನ್ನಾಡಲು ಭಾರತ ತಂಡ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದೆ. ಅಭ್ಯಾಸ ನಿರತ ಫೋಟೊವನ್ನು ಹಾರ್ದಿಕ್ ಪಾಂಡ್ಯ(Hardik Pandya) ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಸಮರಕ್ಕೆ ನಾವು ಸಿದ್ಧ ಎಂದು ಎಂದು ಬರೆದುಕೊಂಡಿದ್ದಾರೆ. ಮೊದಲ ಪಂದ್ಯ ಅಕ್ಟೋಬರ್ 6 ರಂದು ಗ್ವಾಲಿಯಾರ್‌ನಲ್ಲಿ ನಡೆಯಲಿದೆ.
ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಆಟಗಾರರಿಗೂ ಈ ಸರಣಿಯಲ್ಲಿ ಅವಕಾಶ ನೀಡಲಾಗಿದೆ. ಎಕ್ಸ್‌ಪ್ರೆಸ್ ವೇಗಿ ಮಾಯಾಂಕ್ ಯಾದವ್ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
ಸೂರ್ಯಕುಮಾರ್, ಹಾರ್ದಿಕ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಸೇರಿ ಕೆಲ ಆಟಗಾರು ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆಡಿದ ಬಳಿಕ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಶುಕ್ರವಾರ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮಾರ್ಗದರ್ಶನದಲ್ಲಿ ಬೌಲಿಂಗ್ ಅಭ್ಯಾಸ ನಡೆಸಲಾಯಿತು. ಹಾರ್ದಿಕ್ ಕೂಡ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಪಾಂಡ್ಯ ಬೌಲಿಂಗ್ ಬಗ್ಗೆ ಬೌಲಿಂಗ್ ಕೋಚ್ ಮಾರ್ಕೆಲ್(Morne Morkel)ಗೆ ತೃಪ್ತಿ ಇಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ IND vs BAN T20: ಮೊದಲ ಟಿ20ಗೆ ಬಂದ್ ಬಿಸಿ; ಬಿಸಿಸಿಐಗೆ ಹಿಂದು ಮಹಾಸಭಾ ಎಚ್ಚರಿಕೆ
ಮುಖಾಮುಖಿ
ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ ಒಟ್ಟು 14 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಗರಿಷ್ಠ 13 ಪಂದ್ಯಗಳನ್ಬು ಗೆದ್ದು ಬೀಗಿದೆ. ಬಾಂಗ್ಲಾ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. 2019 ರಲ್ಲಿ ಬಾಂಗ್ಲಾಕ್ಕೆ ಈ ಗೆಲುವು ಒಲಿದಿತ್ತು. 7 ವಿಕೆಟ್ ಅಂತರದಿಂದ ಪಂದ್ಯವನ್ನು ಜಯಿಸಿತ್ತು. ಇತ್ತಂಡಗಳು ಕೊನೆಯ ಬಾರಿಗೆ ಟಿ20 ಮುಖಾಮುಖಿಯಾದದ್ದು ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ. ಇಲ್ಲಿ ಭಾರತ 50 ರನ್ ಅಂತರದ ಗೆಲುವು ಸಾಧಿಸಿತ್ತು.
ಪಂದ್ಯಕ್ಕೆ ಬಂದ್ ಬಿಸಿ
ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿ, ಪಂದ್ಯ ನಡೆಯುವ ದಿನ(ಅ.6) ಗ್ವಾಲಿಯರ್ ಬಂದ್ ಮಾಡಲು ಹಿಂದು ಮಹಾಸಭಾ ಕರೆ ನೀಡಿದೆ. ಪಂದ್ಯವನ್ನು ರದ್ದು ಮಾಡಬೇಕೆಂದು ಹಿಂದು ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರಾಧ್ವಾಜ್, ಕೇಂದ್ರ ಸರ್ಕಾರ ಮತ್ತು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಪಂದ್ಯ ನಡೆಸುವ ಸಾಹಸಕ್ಕೆ ಕೈ ಹಾಕಿದರೆ ಇಡೀ ಗ್ವಾಲಿಯರ್ ನಗರವನ್ನು ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಪಿಚ್ ಅಗೆಯುವ ಮೂಲಕ ಪಂದ್ಯ ನಡೆಯದಂತೆ ತಡೆಯುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಇದು ಬಿಸಿಸಿಐಗೆ ಹೆಚ್ಚಿನ ತಾಪತ್ರಯ ಉಂಟು ಮಾಡಿದೆ. ಪಂದ್ಯ ನಡೆದರೆ ಭಾರಿ ಬಿಗಿ ಭದ್ರತೆಯಲ್ಲಿ ಸಾಗಲಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ, ಜಿತೇಶ್ ಶರ್ಮ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಾಯಾಂಕ್ ಯಾದವ್.