Saturday, 23rd November 2024

IND vs BAN 1st T20: ಬಿಗಿ ಭದ್ರತೆಯಲ್ಲಿ ನಾಳೆ ಭಾರತ-ಬಾಂಗ್ಲಾ ಟಿ20 ಫೈಟ್‌

IND vs BAN 1st T20

ಗ್ವಾಲಿಯರ್‌: ಇಷ್ಟು ದಿನ ಟೆಸ್ಟ್‌ ಕ್ರಿಕೆಟ್‌ ಗುಂಗಿನಲ್ಲಿದ್ದ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಇನ್ನು ಚುಟುಕು ಮಾದರಿಯತ್ತ ತೆರೆದುಕೊಳ್ಳಲ್ಲಲಿದ್ದಾರೆ. ನಾಳೆಯಿಂದ(ಭಾನುವಾ) ಆರಂಭಗೊಳ್ಳುವ ಬಾಂಗ್ಲಾದೇಶ ಮತ್ತು ಭಾರತ(IND vs BAN) ನಡುವಣ ಟಿ20 ಸರಣಿಯತ್ತ ಗಮನ ಹರಿಸಲಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ(Gwalior) ಇತ್ತಂಡಗಳ ಮೊದಲ ಪಂದ್ಯ(IND vs BAN 1st T20) ನಡೆಯಲಿದೆ. ಯುವ ಪಡೆಯನ್ನೇ ನೆಚ್ಚಿಕೊಂಡಿರುವ ಸೂರ್ಯಕುಮಾರ್‌ ಯಾದವ್‌(shubman gill)​ ಸಾರಥ್ಯದ ಯಂಗ್‌ ಟೀಮ್​ ಇಂಡಿಯಾ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದು ಈ ಸೆರಣಿಯ ಕೌತುಕ.

ಈಗಾಗಲೇ ಹಿರಿಯ ಆಟಗಾರರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಇವರ ಸ್ಥಾನ ತುಂಬಲು ಯುವ ಆಟಗಾರರಿಗೆ ಈ ಸರಣಿ ಉತ್ತಮ ಅವಕಾಶ. ಸಿಕ್ಕ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಭಾರತ ಸೀನಿಯರ್​ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು. ಹೀಗಾಗಿ ಎಲ್ಲ ಆಟಗಾರರು ಶ್ರೇಷ್ಠ ಪ್ರದರ್ಶನ ತೋರಬೇಕು.

ಪಂದ್ಯಕ್ಕೆ ಬಿಗಿ ಭದ್ರತೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, ಹಿಂದೂಪರ ಸಂಘಟನೆಗಳು ಭಾರತ-ಬಾಂಗ್ಲಾ ಪಂದ್ಯವನ್ನು ವಿರೋಧಿಸಿ ಗ್ವಾಲಿಯರ್‌ ಬಂದ್‌ಗೆ ಕರೆ ನೀಡಿವೆ. ಹೀಗಾಗಿ ಗ್ವಾಲಿಯರ್‌ ಸ್ಟೇಡಿಯಂ ಸುತ್ತ ಭಾರೀ ಭದ್ರತೆ ಕಲ್ಪಿಸಲಾಗಿದೆ. ಭದ್ರತೆಗಾಗಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನು ಓದಿ IND vs NZ: ಭಾರತ-ಕಿವೀಸ್‌ ಬೆಂಗಳೂರು ಟೆಸ್ಟ್‌ ಟಿಕೆಟ್‌ ಸೇಲ್‌ ಶುರು; ಇಲ್ಲಿ ಲಭ್ಯ

14 ವರ್ಷದ ಬಳಿಕ ಪಂದ್ಯ

ಗ್ವಾಲಿಯರ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯದೆ ಸುಮಾರು 14 ವರ್ಷಗಳೇ ಕಳೆದಿವೆ. ಇಲ್ಲಿ ಕೊನೆಯ ಬಾರಿಗೆ ಭಾರತ ತಂಡ ಪಂದ್ಯವನ್ನಾಡಿದ್ದು 2010ರಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಕ್ರಿಕೆಟ್‌ ದೇವರು ಎಂದು ಕರೆಸಿಕೊಳ್ಳುವ ಸಚಿನ್‌ ತೆಂಡೂಲ್ಕರ್‌ ಅವರು ದ್ವಿಶತಕ ಬಾರಿಸಿ ಚರಿತ್ರೆ ಬರೆದಿದ್ದರು. ಈ ಪಂದ್ಯ ನಡೆದ ಬಳಿಕ ಇಲ್ಲಿ ಇದುವರೆಗೂ ಯಾವುದೇ ಪಂದ್ಯ ನಡೆದಿಲ್ಲ. ಹೀಗಾಗಿ ಪಿಚ್‌ ಹೇಗೆ ವರ್ತಿಸಲಿದೆ ಎಂಬುದು ಕೂಡ ಮುಖ್ಯ. ಜತೆಗೆ ಇಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯ ಕೂಡ ಇದಾಗಿದೆ.

ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ. ಬಾಂಗ್ಲಾದೇಶ ವಿರುದ್ಧ ಇದುವರೆಗೆ ಆಡಿದ 14 ಟಿ20 ಪಂದ್ಯಗಳಲ್ಲಿ ಭಾರತ ಗರಿಷ್ಠ 13 ಪಂದ್ಯಗಳನ್ಬು ಗೆದ್ದಿದೆ. ಚೊಚ್ಚಲ ಕರೆ ಪಡೆದ ಎಕ್ಸ್‌ಪ್ರೆಸ್‌ ವೇಗಿ ಮಾಯಾಂಕ್‌ ಯಾದವ್‌ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಸೂರ್ಯಕುಮಾರ್‌, ಹಾರ್ದಿಕ್‌, ಸಂಜು ಸ್ಯಾಮ್ಸನ್‌, ರಿಂಕು ಸಿಂಗ್‌ ಸೇರಿ ಕೆಲ ಆಟಗಾರು ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆಡಿದ ಬಳಿಕ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಟೆಸ್ಟ್‌ ಸರಣಿಯಲ್ಲಿ ಸೋಲು ಕಂಡಿರುವ ಬಾಂಗ್ಲಾ ಈ ಸೇಡನ್ನು ಟಿ20 ಸರಣಿಯಲ್ಲಿ ತೀರಿಸಿಕೊಳ್ಳಲು ಪಣ ತೊಟ್ಟಿದೆ. ಹೀಗಾಗಿ ಸರಣಿ ಅತ್ಯಂತ ರೋಚಕವಾಗಿ ಸಾಗುವ ನಿರೀಕ್ಷೆ ಮಾಡಬಹುದು.