ಕಾನ್ಪುರ: ಇಲ್ಲಿನ ಗ್ರೀನ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಳ್ಳಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಣ ದ್ವಿತೀಯ(IND vs BAN 2nd Test) ಟೆಸ್ಟ್‌ಗೆ ಹವಾಮಾನ ಇಲಾಖೆ ಪಂದ್ಯಕ್ಕೂ ಮುನ್ನವೇ ಮಳೆಯ ಎಚ್ಚರಿಕೆ ನೀಡಿತ್ತು. ಇದೀಗ ಕಾನ್ಪುರದಲ್ಲಿ ಮಳೆಯಾಗುತ್ತಿದ್ದು ಟಾಸ್ ಪ್ರಕ್ರಿಯೆ ವಿಳಂಬವಾಗಿದೆ.
ಗುರುವಾರ ರಾತ್ರಿ ಕಾನ್ಪುರದಲ್ಲಿ ಭಾರೀ ಮಳೆಯಾಗಿತ್ತು. ಪಂದ್ಯ ಆರಂಭವಾಗುವ ಶುಕ್ರವಾರ ಬೆಳಗ್ಗೆಯೂ ಇಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ. ಸದ್ಯ ಮಳೆ ನಿಂತರೂ ಪಿಚ್‌ಗಳ ಕವರ್‌ಗಳನ್ನು ತೆಗೆದಿಲ್ಲ. ಮೈದಾನ ಕೂಡ ಒದ್ದೆ ಇರುವ ಕಾರಣ ಟಾಸ್ ಪ್ರಕ್ರಿಯೆ ಮುಂದೂಡಲಾಗಿದೆ. ಪಂದ್ಯ ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಆರಂಭವಾಗಬಹುದು. ಗುರುವಾರ ಮಳೆಯಾದ ಸಂಗತಿಯನ್ನು ದಿನೇಶ್ ಕಾರ್ತಿಕ್ ತಮ್ಮ ಟ್ವೀಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮೈದಾನಕ್ಕೆ ಕವರ್‌ಗಳನ್ನು ಹೊದಿಸಿದ ಫೋಟೊವನ್ನು ಶೇರ್ ಮಾಡಿದ್ದಾರೆ.
ಇಲ್ಲಿ ಕಳೆದ ಮೂರು ವರ್ಷಗಳಿಂದ ಇಲ್ಲಿ ಯಾವುದೇ ಟೆಸ್ಟ್ ಪಂದ್ಯ ನಡೆದಿಲ್ಲ. ಹೀಗಾಗಿ ಪಿಚ್ ಹೇಗೆ ವರ್ತಿಸಲಿದೆ ಎನ್ನುವ ಕುತೂಹಲವೂ ಸಹಜ. ಇನ್ನೊಂದೆಡೆ ಭಾರತ ಮತ್ತು ಬಾಂಗ್ಲಾ ಈ ಮೈದಾನದಲ್ಲಿ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯ ಕೂಡ ಇದಾಗಿದೆ.
ಇದನ್ನೂ ಓದಿ IND vs BAN 2nd Test: ಸಿಕ್ಸರ್ ದಾಖಲೆ ಸನಿಹ ರೋಹಿತ್, ಜೈಸ್ವಾಲ್
ಕಾನ್ಪುರ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಭಾರೀ ಮಳೆ ಎಚ್ಚರಿಕೆ ಇದೆ. ಶೇ.92ರಷ್ಟಿದೆ. ಅದರಲ್ಲೂ ಮೊದಲ ದಿನದ ಮೊದಲ 2 ಅವಧಿಗಳಲ್ಲಿ ಮಳೆ ಅಡಚಣೆಯ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಮೊದಲ ದಿನದ ಆಟ ನಡೆಯುವುದು ಬಹುತೇಕ ಅನುಮಾನ ಎಂಬಂತಿದೆ. 2, 3 ಮತ್ತು 4ನೇ ದಿನ ಮಳೆ ಕಾಡುವ ಸಾಧ್ಯತೆ ಶೇ. 49, 65, 56ರಷ್ಟಿದೆ. ಪಂದ್ಯದ ಕೊನೇ ದಿನದಾಟದಲ್ಲಿ ಮಾತ್ರ ಮಳೆ ಅಡಚಣೆ ಸಾಧ್ಯತೆ ಕೇವಲ ಶೇ.3ರಷ್ಟಿದೆ.
ಕಾನ್ಪುರ ಭಾರತ ತಂಡದ ಪಾಲಿಗೆ ಭದ್ರಕೋಟೆ ಇದ್ದಂತೆ. ಇಲ್ಲಿ ಕಳೆದ 41 ವರ್ಷಗಳಿಂದ ಭಾರತ ಆಡಿದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಸೋಲು ಕಂಡಿಲ್ಲ. 1983ರಲ್ಲಿ ಭಾರತ ತಂಡಕ್ಕೆ ವೆಸ್ಟ್‌ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 83 ರನ್‌ಗಳ ಸೋಲು ಎದುರಾಗಿತ್ತು. ಆ ಬಳಿಕ ಭಾರತ ಕಾನ್ಪುರದಲ್ಲಿ 9 ಪಂದ್ಯಗಳನ್ನಾಡಿದೆ. ಈ ಪೈಕಿ 5ರಲ್ಲಿ ಗೆದ್ದಿದ್ದರೆ, 4 ಪಂದ್ಯಗಳು ಡ್ರಾಗೊಂಡಿವೆ. ಒಟ್ಟಾರೆ ಭಾರತ ತಂಡ ಈ ವರೆಗೂ ಕಾನ್ಪುರದಲ್ಲಿ ಆಡಿರುವ 23 ಪಂದ್ಯಗಳಲ್ಲಿ 7ರಲ್ಲಿ ಜಯಗಳಿಸಿದೆ. 3ರಲ್ಲಿ ಸೋಲು, 13 ಪಂದ್ಯ ಡ್ರಾ ಮಾಡಿಕೊಂಡಿವೆ. ಆದರೆ, ಭಾರತ ಇಲ್ಲಿ ಆಡಿದ್ದ ಚೊಚ್ಚಲ ಪಂದ್ಯದಲ್ಲಿ ಸೋಲು ಕಂಡಿತ್ತು. 1952 ರಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ದದ ಪಂದ್ಯ ಇದಾಗಿತ್ತು. ಭಾರತ 8 ವಿಕೆಟ್ ಸೋಲು ಕಂಡಿತ್ತು.