ಚೆನ್ನೈ: ಆರ್. ಅಶ್ವಿನ್(88ಕ್ಕೆ 6) ಆಲ್‌ರೌಂಡರ್ ಪ್ರದರ್ಶನ ಜತೆಗೆ ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಶತಕದಾಟದ ನೆರವು ಪಡೆದ ಭಾರತ ತಂಡ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 280 ರನ್ ಅಂತರದಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ಕೇವಲ 4 ದಿನಕ್ಕೆ ಮುಕ್ತಾಯ ಕಂಡಿತು.
ಗೆಲುವಿಗೆ 515 ರನ್ ಪಡೆದ ಬಾಂಗ್ಲಾ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 158 ರನ್ ಬಾರಿಸಿತ್ತು. ಮಂದ ಬೆಳಕಿನಿಂದಾಗಿ ಆಟವನ್ನು ಬೇಗನೆ ಮುಗಿಸಲಾಗಿತ್ತು. ನಾಲ್ಕನೇ ದಿನದಾಟದ ಆರಂಭದಲ್ಲಿ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಅನುಭವಿ ಶಕಿಬ್ ಅಲ್ ಹಸನ್ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಪೈಪೋಟಿ ನೀಡುವ ಸೂಚನೆ ನಿಡಿದರು. ಈ ವೇಳೆ ಅಶ್ವಿನ್ ಶಕಿಬ್ ವಿಕೆಟ್ ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಮೂರನೇ ದಿನ 3 ವಿಕೆಟ್ ಕಿತ್ತಿದ್ದ ಅಶ್ವಿನ್ ನಾಲ್ಕನೇ ದಿನ ಮತ್ತೆ ಮೂರು ವಿಕೆಟ್ ಕಿತ್ತು ಒಟ್ಟಾರೆ 6 ವಿಕೆಟ್ ಕಿತ್ತ ಸಾಧನೆಗೈದರು. ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ಲೆಸ್ ಎನಿಸಿಕೊಂಡರೂ ಬ್ಯಾಟಿಂಗ್‌ನಲ್ಲಿ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು.
ವಾರ್ನ್ ದಾಖಲೆ ಸರಿಗಟ್ಟಿದ ಅಶ್ವಿನ್
ಅಶ್ವಿನ್ 5 ವಿಕೆಟ್ ಪೂರ್ತಿಗೊಳಿಸುತ್ತಿದ್ದಂತೆ ಅತ್ಯಧಿಕ ಬಾರಿ ಟೆಸ್ಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಜತೆ ಜಂಟಿ ದ್ವಿತೀಯ ಸ್ಥಾನಕ್ಕೇರಿದರು. ಉಭಯ ಆಟಗಾರರು 37 ಬಾರಿ ಈ ಸಾಧನೆ ಮಾಡಿದ್ದಾರೆ. ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 67 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.
ಇದನ್ನೂ ಓದಿ Virat Kohli: ನಾಗಿಣಿ ನೃತ್ಯ ಮಾಡಿದ ಕೊಹ್ಲಿ; ವಿಡಿಯೊ ವೈರಲ್
ಗುರುವಾರ ಆರಂಭಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 376 ರನ್ ಬಾರಿಸಿತ್ತು. ಜವಾಬಿತ್ತ ಬಾಂಗ್ಲಾದೇಶ ಕೇವಲ 149 ರನ್‌ಗೆ ಸರ್ವಪತನ ಕಂಡಿತ್ತು. ಫಾಲೋಆನ್ ಹೇರದ ಭಾರತ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ನಡೆಸಿ 4 ವಿಕೆಟ್‌ಗೆ 287 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಬಾಂಗ್ಲಾ ದ್ವಿತೀಯ ಇನಿಂಗ್ಸ್‌ನಲ್ಲಿ 234 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಭಾರತ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಅಜೇಯ ಶತಕ ಬಾರಿಸಿ ಮಿಂಚಿದ್ದರು.
ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ತಂಡಕ್ಕೆ ಆಸರೆಯಾದದ್ದು ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮಾತ್ರ. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅರ್ಧಶಕತ ಬಾರಿಸಿದರು. ಒಟ್ಟು 127 ಎಸೆತಗಳಿಂದ 82 ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಜಡೇಜಾ 58 ಕ್ಕೆ 3 ವಿಕೆಟ್ ಕಿತ್ತರು. ಅಶ್ವಿನ್ 88ಕ್ಕೆ 6 ವಿಕೆಟ್, ಬುಮ್ರಾ 1 ವಿಕೆಟ್ ಕಿತ್ತರು.