Tuesday, 24th September 2024

IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ

IND vs BAN

ಚೆನ್ನೈ: ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ ದ್ವಿತೀಯ ಹಾಗೂ ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಯೋಜನೆಯಲ್ಲಿದೆ. ಇದೇ ಕಾರಣದಿಂದ ದ್ವಿತೀಯ ಪಂದ್ಯದ ಆಡುವ ಬಳಗದಲ್ಲಿ ಒಂದು ಬದಲಾವಣೆ ನಡೆಸಲು ಮುಂದಾಗಿರುವುದಾಗಿ ವರದಿಯಾಗಿದೆ.

ಪಂದ್ಯ ನಡೆಯುವ ಕಾನ್ಪುರದ ಗ್ರೀನ್‌ ಪಾರ್ಕ್‌ ಸ್ಪಿನ್‌ ಸ್ನೇಹಿ ಪಿಚ್‌ ಆಗಿದೆ. ಈ ಹಿಂದೆ ಇಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿಯೂ ಸ್ಪಿನ್ನರ್‌ಗಳೇ ಹೆಚ್ಚಿನ ಮೇಲುಗೈ ಸಾಧಿಸಿದ್ದಾರೆ. ಬಾಂಗ್ಲಾ ತಂಡದಲ್ಲಿಯೂ ಅಪಾಯಕಾರಿ ಸ್ಪಿನ್‌ ಬೌಲರ್‌ಗಳು ಇರುವ ಕಾರಣ ಭಾರತ ಈ ಪಂದ್ಯಕ್ಕೆ ತ್ರಿವಳಿ ಸ್ಪಿನ್ನರ್‌ಗಳನ್ನು ದಾಳಿಗೆ ಇಳಿಸಲಿದೆ ಎಂಬ ಮಾಹಿತಿ ಲಭಿಸಿದೆ. ಅಶ್ವಿ‌ನ್‌, ಜಡೇಜ ಮೊದಲ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಮೂರನೇ ಸ್ಪಿನ್ನರ್‌ ಆಗಿ ಕುಲ್‌ದೀಪ್‌ ಯಾದವ್‌ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಎರಡನೇ ಪಂದ್ಯಕ್ಕೆ ಸ್ಪಿನ್‌ ವಿಭಾಗವೇ ಟೀಮ್‌ ಇಂಡಿಯಾದ ಟ್ರಂಪ್‌ಕಾರ್ಡ್‌. ಗ್ರೀನ್‌ಪಾರ್ಕ್‌ ಟ್ರ್ಯಾಕ್‌ ಸ್ಪಿನ್ನಿಗೆ ತಿರುಗಿದರೆ, ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ತಿಣುಕಾಡುವುದರ ಬಗ್ಗೆ ಅನುಮಾನವೇ ಬೇಡ.

ಬಾಂಗ್ಲಾವನ್ನು ಕಟ್ಟಿ ಹಾಕಲೆಂದೇ ಸ್ಪಿನ್‌ ಟ್ರ್ಯಾಕ್‌ ಆಗಿದ್ದ ಚೆನ್ನೈನ ಚೆಪಾಕ್‌ ಪಿಚ್‌ ಅನ್ನು ಉದ್ದೇಶ ಪೂರ್ವಕವಾಗಿಯೇ ಸ್ಪೀಡ್‌ ಟ್ರ್ಯಾಕ್‌ ಆಗಿ ಬದಲಾಯಿಸಲಾಗಿತ್ತು. ಆದರೆ, ಕಾನ್ಪುರದಲ್ಲಿ ಸ್ಪಿನ್‌ ಟ್ರ್ಯಾಕ್‌ನಲ್ಲೇ ಆಡಲಿದೆ. ಕುಲ್‌ದೀಪ್‌ ಆಗಮನದಿಂದ ವೇಗಿ ಮೊಹಮ್ಮದ್‌ ಸಿರಾಜ್‌ ಜಾಗ ಬಿಡಬೇಕು. ಮೊದಲ ಪಂದ್ಯದಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಜಸ್‌ಪ್ರೀತ್‌ ಬುಮ್ರಾ ಜತೆ ಆಕಾಶ್‌ ದೀಪ್ ವೇಗದ ವಿಭಾಗದಲ್ಲಿ ಕಾಣಿಸಿಕೊಳ್ಳಬಹುದು.

ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌, ಸರ್ಫರಾಜ್‌ ಖಾನ್‌, ರಿಷಭ್‌ ಪಂತ್‌, ಧ್ರುವ್‌ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಜಸ್‌ಪ್ರೀತ್‌ ಬುಮ್ರಾ, ಯಶ್‌ ದಯಾಳ್‌.

ಇದನ್ನೂ ಓದಿ IND vs BAN: ಭಾರತ-ಬಾಂಗ್ಲಾ ಮೊದಲ ಟಿ20 ಅನುಮಾನ; ಅ.6ರಂದು ಗ್ವಾಲಿಯರ್‌ ಬಂದ್‌!

ಚೆನ್ನೈಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 376 ರನ್‌ ಬಾರಿಸಿತ್ತು. ಜವಾಬಿತ್ತ ಬಾಂಗ್ಲಾದೇಶ ಕೇವಲ 149 ರನ್‌ಗೆ ಸರ್ವಪತನ ಕಂಡಿತ್ತು. ಫಾಲೋಆನ್‌ ಹೇರದ ಭಾರತ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸಿ 4 ವಿಕೆಟ್‌ಗೆ 287 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತು. ಗೆಲುವಿಗೆ 515 ರನ್‌ ಪಡೆದ ಬಾಂಗ್ಲಾ 234 ರನ್‌ ಬಾರಿಸಿ 280 ರನ್‌ ಅಂತರದ ಹೀನಾಯ ಸೋಲು ಕಂಡಿತ್ತು.