Friday, 22nd November 2024

IND vs BAN: ದಂಡದ ಶಿಕ್ಷೆ ಭೀತಿಯಲ್ಲಿ ಬಾಂಗ್ಲಾ ತಂಡ; ಕಾರಣವೇನು?

IND vs BAN

ಚೆನ್ನೈ: ಭಾರತ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ(IND vs BAN) ಐಸಿಸಿ ದಂಡನೆಗೆ(ICC Punishment) ಒಳಗಾಗುವ ಸಾಧ್ಯತೆಯೊಂದು ಕಂಡುಬಂದಿದೆ. ಆಟದ ಅವಧಿಯನ್ನು ಅರ್ಧ ಗಂಟೆ ವಿಸ್ತರಿಸಿದ ಬಳಿಕವೂ ಬಾಂಗ್ಲಾ ಬೌಲರ್ ಗಳು ಕಡ್ಡಾಯ ಓವರ್‌ಗಳಿಗಿಂತ 10 ಓವರ್‌ ಕಡಿಮೆ ಎಸೆದಿದ್ದು ದಂಡದ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ಕಳೆದ ತಿಂಗಳು ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯಲ್ಲಿಯೂ ಬಾಂಗ್ಲಾ ತಂಡ ನಿಗದಿತ ಆಟದ ಅವಧಿಯಲ್ಲಿ ಕಡಿಮೆ ಓವರ್‌ ಎಸೆದ ಕಾರಣಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಅಂಕವನ್ನು ಕಳೆದುಕೊಂಡಿತ್ತು. ಈ ತಪ್ಪಿನಿಂದ ಬುದ್ಧಿ ಕಲಿಯದ ಬಾಂಗ್ಲಾ ಮತ್ತೆ ಇದೇ ತಪ್ಪನ್ನು ಮಾಡಿದೆ.

ಭಾರತ ವಿರುದ್ಧದ ಪಂದ್ಯದ ಮೊದಲ ದಿನ ಕೇವಲ 80 ಓವರ್‌ಗಳ ಬೌಲಿಂಗ್ ಸಾಧ್ಯವಾಗಿದೆ. ಮೊದಲ ಅವಧಿಯಲ್ಲಿ 23, ಎರಡನೇ ಅವಧಿಯಲಿ 25 ಮತ್ತು ಅಂತಿಮ ಸೆಷನ್ ನಲ್ಲಿ 32 ಓವರ್‌ ಗಳ ಬೌಲಿಂಗ್ ನಡೆಸಲಾಗಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಎಕ್ಸ್ ನಲ್ಲಿ ಪ್ರತಿಪಾದಿಸಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಗಳ ಷರತ್ತಿನ (ಆರ್ಟಿಕಲ್ 16.11.12) ಅನ್ವಯ ಸುತ್ತು ಹಂತದಲ್ಲಿ ನಿಧಾನಗತಿಯ ಬೌಲಿಂಗ್ ನಡೆಸುವ ತಂಡದ ಪ್ರತಿ ಪೆನಾಲ್ಟಿ ಓವರ್‌ಗೆ ಒಂದು ಅಂಕದಂತೆ ತಂಡದಿಂದ ಕಡಿತಗೊಳಿಸಲಾಗುತ್ತದೆ.

ಗುರುವಾರ ಆರಂಭಗೊಂಡ ಟೆಸ್ಟ್‌ನ ಮೊದಲ ದಿನ ಆರಂಭಿಕ ಹಂತದಲ್ಲಿ 34 ರನ್‌ಗೆ 3 ವಿಕೆಟ್‌ ಕಬಳಿಸಿ ಮೇಲುಗೈ ಸಾಧಿಸಿದ್ದ ಬಾಂಗ್ಲಾ ಆ ಬಳಿಕ ಬೌಲಿಂಗ್‌ ಲಯ ಕಳೆದುಕೊಂಡಿತು. ಸ್ಪಿನ್‌ ಆಲ್‌ರೌಂಡರ್‌ಗಳಾದ ಆರ್‌. ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಸೇರಿಕೊಂಡು ಬಾಂಗ್ಲಾ ಬೌಲರ್‌ಗಳ ಬೆವರಿಲಿಸಿದರು. ಅಶ್ವಿನ್‌ ಶತಕ ಬಾರಿಸಿದರೆ, ಜಡೇಜಾ ಅರ್ಧಶತಕ ಬಾರಿಸಿ ಮಿಂಚಿದ್ದರು. ಸದ್ಯ ಭಾರತ ಉತ್ತಮ ಸ್ಥಿತಿಯಲ್ಲಿದ್ದು ಬೃಹತ್‌ ಮೊತ್ತ ಕಲೆಹಾಕುವತ್ತ ಮುನ್ನುಗ್ಗುತ್ತಿದೆ.

ಇದನ್ನೂ ಓದಿ IND vs BAN: ದಿಗ್ಗಜರ ಜತೆ ಎಲೈಟ್‌ ಪಟ್ಟಿ ಸೇರಲು ಬುಮ್ರಾ ಸಜ್ಜು; 3 ವಿಕೆಟ್‌ ಅಗತ್ಯ

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ಈ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಸ್ವದೇಶದಲ್ಲಿ ಆಡಿರುವ ತನ್ನ ಮೊದಲ 10 ಇನಿಂಗ್ಸ್‌ಗಳಿಂದ 750ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಜೈಸ್ವಾಲ್‌ಗೂ ಮುನ್ನ ಈ ವಿಶ್ವ ದಾಖಲೆ ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಜಾರ್ಜ್ ಹೆಡ್ಲಿ ಹೆಸರಲ್ಲಿತ್ತು. ಹೆಡ್ಲಿ 1935ರಲ್ಲಿ 747 ರನ್ ಗಳಿಸಿದ್ದರು. ಇದೀಗ 89 ವರ್ಷಗಳ ಬಳಿಕ ಈ ದಾಖಲೆ ಪತನಗೊಂಡಿದೆ. ಜೈಸ್ವಾಲ್‌ ಬಾಂಗ್ಲಾ ವಿರುದ್ಧ 118 ಎಸೆತ ಎದುರಿಸಿ 56 ರನ್‌ ಬಾರಿಸಿ ನಹಿದ್ ರಾಣಾಗೆ ವಿಕೆಟ್‌ ಒಪ್ಪಿಸಿದರು.