ಕಾನ್ಪುರ: ಭಾರೀ ಮಳೆಯಿಂದ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ(IND vs BAN) ಮತ್ತು ಭಾರತ ನಡುವಣ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದ(IND vs BAN Day 2) ಆಟ ಬಹುತೇಕ ರದ್ದುಗಗೊಳ್ಳುವ ಸಾಧ್ಯತೆ ಕಂಡು ಬಂದಿದೆ. 2ನೇ ದಿನವಾದ ಶನಿವಾರ ಬೆಳಗ್ಗೆಯೇ ಕಾನ್ಪುರದಲ್ಲಿ ಮಳೆ ಆರ್ಭಟ ಶುರುವಾಗಿದೆ. ಸಂಪೂರ್ಣವಾಗಿ ಮೈದಾನಕ್ಕೆ ಕವರ್‌ಗಳನ್ನು ಹೊದಿಸಲಾಗಿದೆ. ಶುಕ್ರವಾರ(ಸೆ 27) ಆರಂಭವಾದ ಈ ಟೆಸ್ಟ್ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಅಡ್ಡಿ ಪಡಿಸಿತ್ತು. ಪಂದ್ಯ ಆರಂಭಕ್ಕೂ ಮುನ್ನವೇ ಹವಾಮಾನ ಇಲಾಖೆ ಶೇ.92ರಷ್ಟು ಮಳೆ ಎಚ್ಚರಿಕೆ ನೀಡಿತ್ತು.
ಊಟದ ವಿರಾಮದ ತನಕ ಯಾವುದೇ ಅಡೆ ತಡೆ ಇಲ್ಲದೆ ಸಾಗಿದ ಪಂದ್ಯಕ್ಕೆ ಆ ಮೇಲೆ ಎಡೆಬಿಡದೆ ಸುರಿದ ಮಳೆಯಿಂದಾಗಿ, ದಿನದ ಆಟವನ್ನು ರದ್ದುಗೊಳಿಸಲಾಗಿತ್ತು. ಕೇವಲ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಆದರೆ ಇಂದು ಪಂದ್ಯ ನಡೆಯುವುದೇ ಅನುಮಾನ ಎನ್ನುವ ರೀತಿಯಲ್ಲಿ ಮಳೆ ಸುರಿಯುತ್ತಿದೆ. ಮಳೆ ನಿಂತರೂ ಕೂಡ ಮೈದಾನ ಒಣಗುವುದು ಕಷ್ಟ ಸಾಧ್ಯ.
ಮೊದಲ ದಿನದಾಟದಲ್ಲಿ ಜಾಕಿರ್ ಹಸನ್ ಶೂನ್ಯಕ್ಕೆ ನಿರ್ಗಮಿಸಿದರೆ, ಶಾದ್ಮನ್ ಇಸ್ಲಾಂ 24, ನಜ್ಮುಲ್ ಹೊಸೈನ್ ಶಾಂಟೊ 31 ರನ್ ಗಳಿಸಿ ಔಟಾದರು .ಮೊಮಿನುಲ್ ಹಕ್ 40 ರನ್, ಮುಶ್ಫಿಕರ್ ರಹೀಂ 6 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನ ಆಕಾಶ್ ದೀಪ್ 2 ವಿಕೆಟ್, ಆರ್ ಅಶ್ವಿನ್ 1 ವಿಕೆಟ್ ಪಡೆದರು.
ಟೆಸ್ಟ್ ಪಂದ್ಯದ ಮೊದಲ ದಿನ ವಿವಾದವೊಂದು ನಡೆಯಿತು. ಬಾಂಗ್ಲಾದ ಹುಲಿ ವೇಷಧಾರಿ ಅಭಿಮಾನಿ “ಟೈಗರ್ ರಾಬಿ’ಗೆ ಕಾನ್ಪುರ ಪ್ರೇಕ್ಷಕರು ಥಳಿಸಿದ್ದಾರೆ, ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿತ್ತು. ಅನಂತರ ಸ್ಪಷ್ಟನೆ ನೀಡಿದ ಪೊಲೀಸರು, “ರಾಬಿಗೆ ಪ್ರೇಕ್ಷಕರು ಹೊಡೆದಿಲ್ಲ. ನಿರ್ಜಲೀಕರಣದಿಂದ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದು ಎಂದು ತಿಳಿಸಿದರು. ಹೀಗಾಗಿ ಈ ಘಟನೆ ತಣ್ಣಗಾಯಿತು.
“ಸಿ’ ಸ್ಟಾಂಡ್‌ನಲ್ಲಿ ಬಾಂಗ್ಲಾದೇಶದ ಧ್ವಜ ಹಿಡಿದ ರಾಬಿ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಆರಂಭದಲ್ಲಿ ಮಾಧ್ಯಮದವರು ಮಾತಾಡಿಸಿದಾಗ, “ಸ್ಥಳೀಯ ಅಭಿ ಮಾನಿಗಳು ನನ್ನನ್ನು ಥಳಿಸಿ ಹಲ್ಲೆ ನಡೆಸಿದ್ದಾರೆ. ಹೊಟ್ಟೆಗೆ ಗುದ್ದಿದ್ದಾರೆ’ ಎಂದು ರಾಬಿ ಹೇಳಿದ್ದರು. ಹೊಟ್ಟೆ ಹಿಡಿದು ನರಳುತ್ತ ಹೊರಗೆ ಬಂಗಾದ ರಾಬಿಗೆ ಕುರ್ಚಿ ಕೊಟ್ಟು ಕೂರಿಸಿ ಉಪಚರಿಸಲಾಗಿತ್ತು. ಬಳಿಕ ಕುಸಿದು ಬಿದ್ದಾಗ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಡಿಯೊ ವೈರಲ್ ಆಗಿತ್ತು.