Friday, 22nd November 2024

IND vs BAN: ಬಾಂಗ್ಲಾದ ಶಕೀಬ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ವಿರಾಟ್‌ ಕೊಹ್ಲಿ

IND vs BAN

ಕಾನ್ಪುರ: ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬಾಂಗ್ಲಾದೇಶದ ಹಿರಿಯ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌(Shakib Al Hasan) ಅವರಿಗೆ ಭಾರತ ತಂಡದ ಕ್ರಿಕೆಟಿಗ ವಿರಾಟ್‌ ಕೊಹ್ಲಿ(Virat Kohli ) ತಮ್ಮ ಬ್ಯಾಟ್‌ ಉಡುಗೊರೆಯಾಗಿ(Virat Kohli gifts bat) ನೀಡಿದ್ದಾರೆ. ಮಂಗಳವಾರ ಕಾನ್ಪುರದಲ್ಲಿ ಕೊನೆಗೊಂಡ 2ನೇ ಟೆಸ್ಟ್‌(IND vs BAN) ಬಳಿಕ ಮೈದಾನದಲ್ಲಿದ್ದ ಶಕೀಬ್‌ ಬಳಿ ತೆರಳಿದ ಕೊಹ್ಲಿ ತಮ್ಮ ಹಸ್ತಾಕ್ಷರವುಳ್ಳ ಬ್ಯಾಟ್‌ ಅನ್ನು ಕೊಟ್ಟು ಶುಭ ಹಾರೈಸಿದರು.

ಕೊಹ್ಲಿ ಮತ್ತು ಶಕೀಬ್‌ ಈ ಹಿಂದೆ ಹಲವು ಬಾರಿ ಪಂದ್ಯವನ್ನಾಡುವಾಗ ಮೈದಾನದಲ್ಲಿ ವಾಗ್ವಾದ ನಡೆಸಿದ್ದರೂ ಕೂಡ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ ಶಕೀಬ್‌ಗೆ ತಮ್ಮ ಬ್ಯಾಟ್ ನೀಡಿ ಕ್ರೀಡಾಸ್ಫೂರ್ತಿ ಮೆರೆದರು. ಕಾನ್ಪುರ ಟೆಸ್ಟ್‌ ಆರಂಭಕ್ಕೂ ಮುನ್ನ ಶಕೀಬ್‌ ತಮ್ಮ ಟೆಸ್ಟ್‌ ನಿವೃತ್ತಿ ಘೋಷಿಸಿದ್ದರು.

ಅಕ್ಟೋಬರ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶದ ಮಿರ್ಜಾಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಶಕೀಬ್‌ ಅವರ ಕೊನೆಯ ಪಂದ್ಯವಾಗಲಿದೆ. ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಶಕೀಬ್‌ ಮುಂದುವರಿಯಲಿದ್ದು, 2025ರ ಚಾಂಪಿಯನ್‌ ಟ್ರೋಫಿ ಬಳಿಕ ಈ ಮಾದರಿಗೂ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ 70 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 128 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 4600 ರನ್ ಕಲೆಹಾಕಿದ್ದಾರೆ. ಇದರಲ್ಲಿ 5 ಶತಕ, 1 ದ್ವಿಶತಕ ಹಾಗೂ 31 ಅರ್ಧಶತಕಗಳು ಸೇರಿವೆ. ಹಾಗೇ 119 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು 242 ವಿಕೆಟ್​ಗಳನ್ನು ಕಬಳಿಸಿದ್ದಾರೆ. 129 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಅವರು 149 ವಿಕೆಟ್‌ಗಳನ್ನು ಪಡೆದುಕೊಂಡಿದ್ದು 2551 ರನ್‌ಗಳನ್ನು ಹೊಡೆದಿದ್ದಾರೆ.

ಇದನ್ನೂ ಓದಿ Kannada New Movie: ನವರಾತ್ರಿಗೆ “ಗೋಪಿಲೋಲ” ನ ಆಗಮನ; ಚಿತ್ರದ ಪೋಸ್ಟರ್‌ ರಿಲೀಸ್‌

ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ಏಳು ವಿಕೆಟ್‌ ಅಂತರದಿಂದ ಗೆದ್ದ ಭಾರತ, ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2023-25 ಅಂಕಪಟ್ಟಿಯಲ್ಲಿ(WTC Points Table) ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸೋಲು ಕಂಡ ಬಾಂಗ್ಲಾದೇಶ 8ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನದಲ್ಲಿದೆ. ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯ ಗೆದ್ದಿರುವ ರೋಹಿತ್‌ ಪಡೆ 74.24 ಶೇಕಡಾವಾರು ಅಂಕ ಹೊಂದಿದೆ. ದ್ವಿತೀಯ ಟೆಸ್ಟ್‌ ಪಂದ್ಯದ ಗೆಲುವಿಗೂ ಮುನ್ನ ಭಾರತದ ಗೆಲುವಿನ ಶೇಕಡಾವಾರು 71.67ರಷ್ಟಿತ್ತು. ನ್ಯೂಜಿಲ್ಯಾಂಡ್‌ ವಿರುದ್ಧ ಸರಣಿ ಗೆದ್ದ ಶ್ರೀಲಂಕಾ 55.56 ಶೇಕಡಾವಾರು ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಹಿಂದಿಕ್ಕಲು ಲಂಕಾಗೆ ಕೇವಲ 7 ಅಂಕದ ವ್ಯತ್ಯಾಸವಿದೆ.