Friday, 22nd November 2024

IND vs BAN: ಮೊದಲ ಟೆಸ್ಟ್‌ಗೆ ಭಾರತದ ತ್ರಿವಳಿ ಸ್ಪಿನ್‌ ಅಸ್ತ್ರ

IND vs BAN

ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ(IND vs BAN) ನಡುವಣ 2 ಪಂದ್ಯಗಳ ಕಿರು ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ(ಸೆ.19) ದಿಂದ ಆರಂಭಗೊಳ್ಳಲಿದೆ. ಇತ್ತಂಡಗಳ ಈ ಸಮರಕ್ಕೆ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಚೆಪಾಕ್‌ ಮೈದಾನ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಈ ಪಂದ್ಯದಲ್ಲಿ ಭಾರತ ತ್ರಿವಳಿ ಸ್ಪಿನ್‌ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಚೆನ್ನೈ ಪಿಚ್‌ ಅನ್ನು ರವಿಚಂದ್ರನ್‌ ಅಶ್ವಿ‌ನ್‌ ಅವರಷ್ಟು ಬಲ್ಲವರು ಮತ್ತೊಬ್ಬರಿಲ್ಲ. ಅಶ್ವಿನ್‌ ಮೂಲತಃ ಚೆನ್ನೈಯವರಾಗಿದ್ದು, ಇದೇ ಮೈದಾನದಲ್ಲಿ ಕ್ರಿಕೆಟ್‌ ಆಡಿ ಬೆಳೆದವರು. ಜತೆಗೆ ಈ ಮೈದಾನದಲ್ಲಿ ಉತ್ತಮ ಬೌಲಿಂಗ್‌ ದಾಖಲೆಯನ್ನು ಕೂಡ ಹೊಂದಿದ್ದಾರೆ. ಇವರ ಜತೆಗೆ ರವೀಂದ್ರ ಜಡೇಜಾ ಕೂಡ ಇರುವುದು ಭಾರತದ ಸ್ಪಿನ್‌ ಕಾಂಬಿನೇಷನ್‌ ಬಲಿಷ್ಠ ಎನ್ನಬಹುದು.

ಜಡೇಜಾ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿರುವ ಕಾರಣ ಈ ಮೈದಾನದಲ್ಲಿ ಆಡಿದ ಸಾಕಷ್ಟು ಅನುಭವ ಅವರಿಗಿದೆ. ಜಡೇಜಾ(Ravindra Jadeja) ಮತ್ತು ಅಶ್ವಿನ್‌(Ravichandran Ashwin) ಮೊದಲ ಆಯ್ಕೆಯಾದರೂ ಮೂರನೇ ಸ್ಪಿನ್ನರ್‌ ಸ್ಥಾನಕ್ಕೆ ಅಕ್ಷರ್‌ ಪಟೇಲ್‌ ಮತ್ತು ಕುಲ್‌ದೀಪ್‌ ಯಾದವ್‌(Kuldeep Yadav) ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿದೆ. ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಯ್ಕೆ ಮಾಡುವುದಾದರೆ ಕುಲ್‌ದೀಪ್‌ಗೆ ಅವಕಾಶ ಸಿಗಬಹುದು. ಹೆಚ್ಚುವರಿ ಬ್ಯಾಟಿಂಗ್‌ ಅಗತ್ಯವಿದ್ದರೆ ಆಗ ಆಲ್‌ರೌಂಡರ್‌ ಅಕ್ಷರ್‌ಗೆ ಸ್ಥಾನ ಸಿಗಬಹುದು. ಒಟ್ಟಾರೆ ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಖಚಿತ.

ವೇಗದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ಗೆ ಆಡುವ ಬಳಗದಲ್ಲಿ ಸ್ಥಾನ ಖಚಿತ. ಇವರಿಗೆ ಸದ್ಯ ಯಾವುದೇ ಪೈಪೋಟಿಯಿಲ್ಲ. ಕೆ.ಎಲ್‌ ರಾಹುಲ್‌ ತಂಡದಲ್ಲಿದ್ದರೂ ವಿಕೆಟ್‌ ಕೀಪರ್‌ ಹೊಣೆ ರಿಷಭ್‌ ಪಂತ್‌ಗೆ ಸಿಗಲಿದೆ. ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಇದೇ ವರ್ಷಾರಂಭದಲ್ಲಿ ಇಂಗ್ಲೆಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲಿ ಕೀಪಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರಿದ ಧ್ರುವ ಜುರೇಲ್‌ ಬೆಂಚ್‌ ಕಾಯಬೇಕಾದೀತು.

ಬಾಂಗ್ಲಾ ಸವಾಲು ಸುಲಭದಲ್ಲ

ಬಾಂಗ್ಲಾದೇಶ ವಿರುದ್ಧ ಭಾರತ ಅಜೇಯವಾಗಿದ್ದರೂ ಕೂಡ ಈ ಬಾರಿಯ ಸವಾಲನ್ನು ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಬಾಂಗ್ಲಾ ಕೆಲವೇ ವಾರಗಳ ಹಿಂದೆ ಪಾಕಿಸ್ತಾನಕ್ಕೆ ತವರಿನಲ್ಲಿಯೇ 2-0 ಅಂತರದ ಸೋಲಿನ ರುಚಿ ತೋರಿಸಿತ್ತು. ಹಿರಿಯ ಮತ್ತು ಯುವ ಆಟಗಾರರ ಸಂಯೋಜನೆಯಲ್ಲಿ ಬಲಿಷ್ಠವಾಗಿರುವ ಬಾಂಗ್ಲಾವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಎದುರಾಳಿ ತನಗಿಂತ ಬಲಿಷ್ಠ ಎನ್ನುವ ನಿಟ್ಟಿನಲ್ಲಿಯೇ ಆಡಬೇಕು ಎಂದು ನಾಯಕ ರೋಹಿತ್‌ ಶರ್ಮ(rohit sharma) ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜತೆಗೆ ಸಹ ಆಟಗಾರರಿಗೂ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.