Saturday, 14th December 2024

IND vs BAN: ನಾಳೆಯಿಂದ ಭಾರತ-ಬಾಂಗ್ಲಾ ಟೆಸ್ಟ್‌

IND vs BAN

ಚೆನ್ನೈ: ಪಾಕಿಸ್ಥಾನವನ್ನು ಅವರದೇ ಅಂಗಳದಲ್ಲಿ 2-0 ಅಂತರದಿಂದ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪ್ರವಾಸಿ ಬಾಂಗ್ಲಾದೇಶ, ಆತಿಥೇಯ ಭಾರತ(IND vs BAN) ವಿರುದ್ಧ ಟೆಸ್ಟ್‌ ಸಮರಕ್ಕೆ ಇಳಿಯಲಿದೆ. ಇದು 2 ಪಂದ್ಯಗಳ ಕಿರು ಸರಣಿಯಾಗಿದ್ದು ಮೊದಲ ಟೆಸ್ಟ್‌ ಗುರುವಾರ(ಸೆ.19) ಆರಂಭವಾಗಲಿದೆ. ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಇದು ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರ ಮೊದಲ ತವರು ಪಂದ್ಯವಾಗಿದೆ. ಹೀಗಾಗಿ ನಿರೀಕ್ಷೆ ಬೆಟ್ಟದಷ್ಟಿದೆ.

ರಾಹುಲ್‌ಗೆ 5ನೇ ಕ್ರಮಾಂಕ

ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವ ಕನ್ನಡಿಗ, ಕೆ.ಎಲ್‌ ರಾಹುಲ್‌ಗೆ ಈ ಸರಣಿ ಅಗ್ನಿ ಪರೀಕ್ಷೆ ಎಂದರೂ ತಪ್ಪಾಗಲಾರದು. ಈಗಾಗಲೇ ಕಳಪೆ ಬ್ಯಾಟಿಂಗ್‌ನಿಂದ ಅವರು ಏಕದಿನ ಮತ್ತು ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ತಂಡದಲ್ಲಿ ಉಳಿಯಬೇಕಿದ್ದರೆ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲೇ ಬೇಕು. ರಾಹುಲ್‌ ಅವರನ್ನು ಮೊದಲ ಪಂದ್ಯದಲ್ಲಿ ಆಡಿಸುವ ಬಗ್ಗೆ ನಾಯಕ ರೋಹಿತ್‌ ಸುದ್ದಿಗೋಷ್ಠಿಯಲ್ಲಿ ಸುಳಿವು ಕೊಟ್ಟಿದ್ದಾರೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸುವ ಸಾಧ್ಯತೆ ಇದೆ.

ರೋಹಿತ್‌ ಜತೆ ಜೈಸ್ವಾಲ್‌ ಆರಂಭಿಕನಾಗಿ ಕಣಕ್ಕಿಳಿದರೆ, ದ್ವಿತೀಯ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌, ಆ ಬಳಿಕ ಕೊಹ್ಲಿ ಆಡಬಹುದು. ಪಂತ್‌ 2022ರ ರಲ್ಲಿ ಸಂಭವಿಸಿದ್ದ ಕಾರು ಅಪಘಾತದ ಬಳಿಕ ಆಡುತ್ತಿರುವ ಮೊದಲ ಟೆಸ್ಟ್‌ ಸರಣಿ ಇದಾಗಿದೆ. ಪಂತ್‌ ಮೊದಲ ಆಯ್ಕೆ ಕೀಪರ್‌ ಆದ ಕಾರಣ ಧ್ರುವ್‌ ಜುರೇಲ್‌ಗೆ ಅವಕಾಶ ಕಷ್ಟ.

ಸ್ಪಿನ್‌ಗೆ ಅಗ್ರ ಪ್ರಾಶಸ್ತ್ಯ

ಬೌಲಿಂಗ್‌ ವಿಭಾಗದತ್ತ ಬಂದಾಗ ಸ್ಪಿನ್ನರ್‌ಗಳಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಏಷ್ಯನ್‌ ಟ್ರ್ಯಾಕ್‌ ಆದ ಕಾರಣ ತಿರುವು ಪಡೆಯುವ ಸಾಧ್ಯತೆ ಹೆಚ್ಚು. ಇದು ಮಾತ್ರವಲ್ಲದೆ ಚೆಪಾಕ್‌ ಮೈದಾನ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಈ ಪಂದ್ಯದಲ್ಲಿ ಭಾರತ ತ್ರಿವಳಿ ಸ್ಪಿನ್‌ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಆರ್‌.ಅಶ್ವಿ‌ನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಇದ್ದಾರೆ. ಮೂರು ಆಯ್ಕೆಗಳಿದ್ದರೆ ಅನುಭವಿ ಅಶ್ವಿ‌ನ್‌, ಜಡೇಜಾ ಮತ್ತು ಕುಲ್‌ದೀಪ್‌ ಆಯ್ಕೆ ಸಾಧ್ಯತೆ ಹೆಚ್ಚು. ವೇಗಿಗಳಾಗಿ ಜಸ್‌ಪ್ರೀತ್‌ ಬುಮ್ರಾ ಮತ್ತು ಸಿರಾಜ್‌ ಕಣಕ್ಕಿಳಿಯಬಹುದು.

ಇದನ್ನೂ ಓದಿ IND vs BAN: ಮೊದಲ ಟೆಸ್ಟ್‌ಗೆ ಭಾರತದ ತ್ರಿವಳಿ ಸ್ಪಿನ್‌ ಅಸ್ತ್ರ

ಬಾಂಗ್ಲಾ ವಿರುದ್ಧ ಅಜೇಯ ದಾಖಲೆ

ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶವಿನ್ನೂ ಭಾರತವನ್ನು ಸೋಲಿಸಿಲ್ಲ. ಈವರೆಗಿನ 13 ಟೆಸ್ಟ್‌ಗಳಲ್ಲಿ ಭಾರತ 11 ರಲ್ಲಿ ಜಯ ಸಾಧಿಸಿದೆ. 2 ಪಂದ್ಯ ಡ್ರಾಗೊಂಡಿದೆ. ಕೊನೆಯ ಪಂದ್ಯ ನಡೆದದ್ದು 2022ರಲ್ಲಿ. ಢಾಕಾದಲ್ಲಿ ನಡೆದ ಈ ಪಂದ್ಯವನ್ನು ಭಾರತ 3 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಭಾರತ ತಂಡ ಇದೇ ಲಯದಲ್ಲಿ ಸಾಗಬಹುದೇ ಎಂಬುದೊಂದು ನಿರೀಕ್ಷೆ.

ಬಾಂಗ್ಲಾ ಕೂಡ ಬಲಿಷ್ಠ

ಪಾಕಿಸ್ತಾನ ವಿರುದ್ಧ ಮಾಡಿದ ಕಾರ್ಯತಂತ್ರವನ್ನೇ ಭಾರತ ವಿರುದ್ಧವೂ ಪ್ರಯೋಗಿಸಲಿದ್ದೇವೆ ಎಂದು ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್‌ ಹುಸೇನ್‌ ಶಾಂತೊ ಪಂದ್ಯಕ್ಕೂ ಮುನ್ನವೇ ಹೇಳಿದ್ದಾರೆ. ಈ ಹಿಂದಿಗಿಂತ ಬಾಂಗ್ಲಾ ಈ ಬಾರಿ ಬಲಿಷ್ಠವಾಗಿ ಗೋಚರಿಸಿದೆ. ಅನುಭವಿ ಆಟಗಾರರ ಜತೆ ಯುವ ಆಟಗಾರರು ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬಾಂಗ್ಲಾದೇಶದ ಬ್ಯಾಟಿಂಗ್‌ ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಂ, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಯಾವುದೇ ಹಂತದಲ್ಲಿಯೂ ತಂಡಕ್ಕೆ ನೆರವಾಗಬಲ್ಲರು. ಬಾಂಗ್ಲಾದ 6.3 ಅಡಿ ಎತ್ತರದ ಯುವ ವೇಗಿ ನಹಿದ್‌ ರಾಣಾ ಇತ್ತೀಚೆಗೆ ರಾವಲ್ಪಿಂಡಿ ಟೆಸ್ಟ್‌ನಲ್ಲಿ 5ವಿಕೆಟ್‌ ಕಬಳಿಸಿ ಪಾಕಿಸ್ತಾನ ತಂಡವನ್ನು ಕಂಗೆಡಿಸಿದ್ದರು. ಭಾರತ ವಿರುದ್ಧವೂ ಅವರು ಅಬ್ಬರಿಸಲು ಸಿದ್ಧರಾಗಿದ್ದಾರೆ.