Friday, 22nd November 2024

IND vs BAN: ಕೋಚ್‌ ಗಂಭೀರ್‌ಗೆ ಜಾಡಿಸಿದ ನೆಟ್ಟಿಗರು; ಕಾರಣವೇನು?

ಮುಂಬಯಿ: ಭಾರತ ತಂಡದ ಮುಖ್ಯ ಕೋಚ್(India head coach) ಗೌತಮ್ ಗಂಭೀರ್(Gautam Gambhir) ಅವರು ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಜಾಹೀರಾತು ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಒಳಗಾಗಿದ್ದಾರೆ. ಭಾರತೀಯ ತಂಡದ ಚುಕ್ಕಾಣಿ ಹಿಡಿದಿರುವ ಗಂಭೀರ್ ಬೆಟ್ಟಿಂಗ್‌ ಉತ್ತೇಜಿಸುವ(Gambhir promoting betting app) ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರ ಕಂಗೆಣ್ಣಿಗೆ ಗುರಿಯಾಗಿದೆ.

ಗಂಭೀರ್‌ ಅವರು ಈ ಹಿಂದೆ ಪಾನ್​ ಮಸಾಲ, ಬೆಟ್ಟಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡ ಭಾರತ ಕ್ರಿಕೆಟ್​ ತಂಡದ​ ಆಟಗಾರರನ್ನು ಬಹಿರಂಗವಾಗಿಯೇ ಹಿಗ್ಗಾಮುಗ್ಗಾ ಜಾಡಿಸಿದ್ದರು. ಪಾನ್‌ ಮಸಾಲ ಜಾಹಿರಾತಿನಲ್ಲಿ ಸುನೀಲ್‌ ಗವಾಸ್ಕರ್‌(sunil gavaskar), ಕಪಿಲ್‌ ದೇವ್‌(kapil dev), ವೀರೇಂದ್ರ ಸೆಹವಾಗ್(Virender Sehwag)​ ಕಾಣಿಸಿಕೊಂಡಿದ್ದರು. “ಇದು ಬಾಯಿಯನ್ನು ತಾಜಾ ಆಗಿಡುವ ಒಂದು ಉತ್ಪನ್ನ” ಎಂದು ಹೇಳುವ ಮೂಲಕ ಪಾನ್‌ ಮಸಾಲ ಕಂಪನಿಗೆ ಪ್ರೋತ್ಸಾಹ ನೀಡಿದ್ದಕ್ಕೆ ಗಂಭೀರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

“ಕ್ರಿಕೆಟಿಗ ಅಥವಾ ಕ್ರೀಡಾಪಟು ಪಾನ್‌ ಮಸಾಲ, ಬೆಟ್ಟಿಂಗ್‌ ಜಾಹೀರಾತಿನಲ್ಲಿ ಪಾಲ್ಗೊಂಡಿರುವುದನ್ನು ನಾನೆಂದೂ ನೋಡಿರಲಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿ. ಸಮಾಜಕ್ಕೆ ಮಾದರಿ ವ್ಯಕ್ತಿಗಳಾದ ನೀವು ಈ ರೀತಿ ಹಣದ ಏಸೆಗೆ ಬಿದ್ದು ಸಮಾಜದ ದಾರಿ ತಪ್ಪಿಸುವ ಕೆಲ ಎಂದಿಗೂ ಮಾಡಬಾರದು” ಎಂದು ಗಂಭೀರ್‌ ಕಿಡಿ ಕಾರಿದ್ದರು.

“ಯಾವುದೇ ಒಬ್ಬ ವ್ಯಕ್ತಿಯನ್ನು ಅವನ ಹೆಸರಿನಿಂದ ಗುರುತಿಸುವುದಿಲ್ಲ, ಬದಲಾಗಿ ಆತ ಮಾಡುವ ಕೆಲಸದಿಂದ ಗುರುತಿಸುತ್ತಾರೆ. ಕ್ರಿಕೆಟ್​ಗೆ ನೀವು ನೀಡಿದ ಸಾಧನೆ ಅಪಾರ, ಅದರಲ್ಲಿ ಒಂದು ಮಾತಿಲ್ಲ. ನಿಮ್ಮನ್ನು ಕೋಟ್ಯಂತರ ಮಕ್ಕಳು ನೋಡುತ್ತಿದ್ದಾರೆ. ನಿಮ್ಮಂತೆ ಆಗಲು ಅವರು ಕೂಡ ಬಯಸುತ್ತಾರೆ, ಆದರೆ ನೀವು ಪಾನ್‌ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅವರು ಕೂಡ ನಿಮ್ಮ ದಾರಿಯನ್ನು ಅನುಸರಿಸಿದರೆ ಕಷ್ಟ. ನೀವು ಈ ಪದಾರ್ಥವನ್ನು ತಿನ್ನುವಂತೆ ನಟಿಸಿದರೂ, ಮಕ್ಕಳಿಗೆ ಇದು ತಿಳಿದಿಲ್ಲ. ಹೀಗಾಗಿ ದಯವಿಟ್ಟು ಹಣಕೋಸ್ಕರ ಈ ಮಟ್ಟಕ್ಕೆ ಇಳಿಯುವುದು ನಾಚಿಕೆಗೇಡು, ಹಣ ಮಾಡುವುದಕ್ಕೆ ಬೇಕಾದಷ್ಟು ಇತರೆ ದಾರಿಗಳೂ ಇವೆ” ಎಂದು ಹೇಳುವ ಮೂಲಕ ಈ ಜಾಹಿರಾತಿನಲ್ಲಿ ನಟಿಸಿದ ಕ್ರಿಕೆಟಿಗರಿಗೆ ಪರೋಕ್ಷವಾಗಿ ಜಾಡಿಸಿದ್ದರು. ಆದರೆ ಇದೀಗ ಸ್ವತಃ ಗಂಭೀರ್‌ ಅವರೇ ಬೆಟ್ಟಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ Kamran Akmal: ಗಂಭೀರ್‌ ನನ್ನ ಸಹೋದರ ಇದ್ದಂತೆ ಎಂದ ಪಾಕ್‌ ಆಟಗಾರ

ಬುದ್ದಿವಾದ ಹೇಳಿದ ನೀವೇ ಈಗ ಈ ರೀತಿ ಮಾಡಿದರೆ ಹೇಗೆ. ನಿಮ್ಮ ಈ ನಡೆ ನೋಡುವಾಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಣುತ್ತಿದೆ ಎಂದು ಕಮೆಂಟ್‌ ಮೂಲಕ ಗಂಭೀರ್‌ಗೆ ಜಾಡಿಸಿದ್ದಾರೆ. ಗಂಭೀರ್‌ ತಮ್ಮ ಟ್ವಿಟರ್‌ ಎಕ್ಸ್‌ನಲ್ಲಿ ಇಂದು ನಡೆಯುವ ಭಾರತ ಮತ್ತು ಬಾಂಗ್ಲಾದೇಶ(IND vs BAN) ನಡುವಣ ಅಂತಿಮ ಟಿ20 ಪಂದ್ಯದ ಗೆಲುವಿನ ಸಾಧ್ಯತೆಯ ಬೆಟ್ಟಿಂಗ್‌ ಜಾಹೀರಾತು ಪ್ರಚಾರ ಮಾಡಿದ್ದರು.