Sunday, 22nd September 2024

IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ

IND vs BAN

ಚೆನ್ನೈ: ಬಾಂಗ್ಲಾದೇಶ(IND vs BAN) ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಗೆದ್ದ ಬೆನ್ನಲ್ಲೇ ಕಾನ್ಪುರದಲ್ಲಿ ನಡೆಯುವ ದ್ವಿತೀಯ ಪಂದ್ಯಕ್ಕೆ(IND vs BAN 2nd Test) ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಮೊದಲ ಪಂದ್ಯಕ್ಕೆ ಆಯ್ಕೆ ಮಾಡಿದ ತಂಡವನ್ನೇ ದ್ವಿತೀಯ ಪಂದ್ಯಕ್ಕೂ ಮುಂದುವರಿಸಲಾಗಿದೆ. ದ್ವಿತೀಯ ಟೆಸ್ಟ್‌ ಸೆ.27ರಿಂದ ಕಾನ್ಪುರದಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೂ ಆಡುವ ಬಳಗದಲ್ಲಿ ಬದಲಾವಣೆ ಸಂಭವಿಸುವುದು ಅನುಮಾನ. ಮೊದಲ ಪಂದ್ಯದ ಕಾಂಬಿನೇಶನ್‌ನಲ್ಲಿಯೇ ಕಣಕ್ಕಿಳಿಯಬಹುದು.

ದುಲೀಪ್‌ ಟ್ರೋಫಿಯಲ್ಲಿ ಶತಕ ಬಾರಿಸಿ ಭಾರೀ ನಿರೀಕ್ಷೆಯಲ್ಲಿದ್ದ ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್ ಸೇರಿ ಕೆಲ ಆಟಗಾರರಿಗೆ ಮತ್ತೆ ನಿರಾಸೆ ಉಂಟಾಗಿದೆ. ಇವರೆಲ್ಲ ದ್ವಿತೀಯ ಪಂದ್ಯದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಆದರೆ ಬಿಸಿಸಿಐ ಮೊದಲ ಪಂದ್ಯದ ತಂಡವನ್ನೇ ಮುಂದುವರಿಸಿದೆ.

ಇದನ್ನೂ ಓದಿ IND vs BAN: 92 ವರ್ಷಗಳ ಬಳಿಕ ಗೆಲುವಿನಲ್ಲಿ ದಾಖಲೆ ಬರೆದ ಭಾರತ

ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌, ಸರ್ಫರಾಜ್‌ ಖಾನ್‌, ರಿಷಭ್‌ ಪಂತ್‌, ಧ್ರುವ್‌ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಜಸ್‌ಪ್ರೀತ್‌ ಬುಮ್ರಾ, ಯಶ್‌ ದಯಾಳ್‌.

ಪ್ರವಾಸಿ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಭಾರತ 280 ರನ್‌ಗಳ ಗೆಲುವು ಸಾಧಿಸಿ ಮೆರೆದಾಡಿದೆ. ಭಾರತ ತಂಡ ಈ ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನು ನಿರ್ಮಿಸಿದೆ. 92 ವರ್ಷಗಳ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಸೋಲುಗಳಿಗಿಂತ ಹೆಚ್ಚಿನ ಗೆಲುವುಗಳನ್ನು ಹೊಂದಿದ ಸಾಧನೆ ಮಾಡಿತು.

ಗುರುವಾರ ಆರಂಭಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 376 ರನ್‌ ಬಾರಿಸಿತ್ತು. ಜವಾಬಿತ್ತ ಬಾಂಗ್ಲಾದೇಶ ಕೇವಲ 149 ರನ್‌ಗೆ ಸರ್ವಪತನ ಕಂಡಿತ್ತು. ಫಾಲೋಆನ್‌ ಹೇರದ ಭಾರತ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸಿ 4 ವಿಕೆಟ್‌ಗೆ  287 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತು. ಗೆಲುವಿಗೆ 515 ರನ್‌ ಪಡೆದ ಬಾಂಗ್ಲಾ 234 ರನ್‌ ಬಾರಿಸಿ ಸೋಲೊಪ್ಪಿಕೊಂಡಿತು. ಭಾರತ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಶುಭಮನ್‌ ಗಿಲ್‌ ಮತ್ತು ರಿಷಭ್‌ ಪಂತ್‌ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಆರ್‌. ಅಶ್ವಿನ್‌ 88ಕ್ಕೆ 6 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.