Wednesday, 20th November 2024

IND vs BAN : ಭಾರತಕ್ಕೆ86 ರನ್‌ಗಳ ಭರ್ಜರಿ ಜಯ; ಟಿ20 ಸರಣಿ ಕೈವಶ

IND vs BAN:

ಹೊಸದಿಲ್ಲಿ: ಆಲ್‌ರೌಂಡರ್ ನಿತಿಶ್‌ ರೆಡ್ಡಿ (74 ರನ್‌, 34 ಎಸೆತ, 4 ಫೊರ್, 7 ಸಿಕ್ಸರ್‌) ಹಾಗೂ ರಿಂಕು ಸಿಂಗ್ (53 ರನ್‌, 29 ಎಸೆತ, 5 ಫೊರ್‌, 3 ಸಿಕ್ಸರ್) ಜೋಡಿಯ ಅರ್ಧ ಶತಕಗಳ ಸಾಧನೆ ಹಾಗೂ ಬೌಲರ್‌ಗಳ ಸಂಘಟಿತ ಹೋರಾಟದ ಬಲದಿಂದ ಮಿಂಚಿದ ಭಾರತ ತಂಡ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ (IND vs BAN) ಎರಡನೇ ಪಂದ್ಯದಲ್ಲಿ 86 ರನ್‌ಗಳ ಬೃಹತ್ ವಿಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ತನ್ನದಾಗಿಸಿಕೊಂಡಿದ್ದ ಭಾರತ ತಂಡ ಇದೀಗ ಚುಟುಕು ಕ್ರಿಕೆಟ್‌ನಲ್ಲಿಯೂ ನೆರೆಯ ದೇಶದ ತಂಡದ ವಿರುದ್ಧ ಪಾರಮ್ಯ ಸಾಧಿಸಿದೆ. ಪಾಕಿಸ್ತಾನ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದು ಅತ್ಯುತ್ಸಾಹದಲ್ಲಿದ್ದ ಬಾಂಗ್ಲಾದೇಶ ತಂಡಕ್ಕೆ ಭಾರತಕ್ಕೆ ಸರಿಸಾಟಿಯಾಗಲು ಸಾಧ್ಯವೇ ಆಗಲಿಲ್ಲ.

ಇಲ್ಲಿನ ಅರುಣ್‌ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 221 ರನ್ ಬಾರಿಸಿತು. ಹೀಗಾಗಿ ಮೊದಲು ಬೌಲಿಂಗ್ ಮಾಡಿ ಭಾರತವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಬಾಂಗ್ಲಾ ನಾಯಕನ ಲೆಕ್ಕಾಚಾರ ಉಲ್ಟಾಹೊಡೆಯಿತು. ದೊಡ್ಡ ಗುರಿಗೆ ಪ್ರತಿಯಾಗಿ ಆಡಿದ ಬಾಂಗ್ಲಾ ತಂಡ ನಿಗದಿತ ಓವರ್‌ಗಳು ಮುಕ್ತಾಯಗೊಂಡಾಗ 9 ವಿಕೆಟ್‌ಗೆ 135 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಭಾರತದ ಬೌಲರ್‌ಗಳ ಪ್ರಭಾವ

ದೊಡ್ಡ ಮೊತ್ತ ಪೇರಿಸಿದ್ದ ಕಾರಣ ಭಾರತದ ಬೌಲರ್‌ಗಳು ಪ್ರವಾಸಿ ತಂಡದ ಬ್ಯಾಟರ್‌ಗಳನ್ನು ಆರಂಭದಿಂದಲೇ ಕಟ್ಟಿ ಹಾಕಿದರು. ಪರ್ವೇಜ್ ಹುಸೈನ್ ಅರ್ಶ್‌ದೀಪ್‌ ಸಿಂಗ್‌ ಬೌಲಿಂಗ್‌ಗೆ ಬೌಲ್ಡ್ ಆದರೆ, ಲಿಟನ್ ದಾಸ್ ವರುಣ್‌ ಬೌಲಿಂಗ್‌ಗೆ ಔಟಾದರು. ನಾಯಕ ನಜ್ಮುಲ್‌ 11 ರನ್ ಬಾರಿಸಿ ವಾಷಿಂಗ್ಟನ್ ಸುಂದರ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರೆ ತೌಹಿದ್‌ ಹೃದೋಯ್‌ ಅಭಿಷೇಕ್ ಶರ್ಮಾ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. 46 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ಆ ಮೇಲೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ನಂತರದಲ್ಲಿ ಮೆಹೆಸಿ ಹಸನ್‌ 16 ಹಾಗೂ ಮಹಮದುಲ್ಲಾ 41 ರನ್ ಬಾರಿಸಿ ಮಿಂಚಿದರು. ಆದರೆ ಉಳಿದವರು ಒಬ್ಬೊಬ್ಬರಾಗಿಯೇ ವಿಕೆಟ್‌ ಒಪ್ಪಿಸಿದ ಕೃಣ ಭಾರತದ ಗೆಲುವು ನಿಶ್ಚಿತವಾಯಿತು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ನಿತಿಶ್ ರೆಡ್ಡಿ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರೆ ಅರ್ಶ್‌ದೀಪ್‌, ವಾಷಿಂಗ್ಟನ್ ಸುಂದರ್‌, ಅಭಿಷೇಕ್ ಶರ್ಮಾ, ಮಯಾಂಕ್‌ ಯಾದವ್ ಹಾಗೂ ರಿಯಾನ್ ಪರಾಗ್‌ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: Viral Video: ಬೌಲಿಂಗ್‌ ಕೋಚ್‌ ಮಾರ್ಕೆಲ್‌ಗೆ ಹಿಂದಿ ಕಲಿಸಿದ ಸೂರ್ಯಕುಮಾರ್‌

ನಿತಿಶ್ ಅಬ್ಬರದ ಆಟ

ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಮತ್ತೊಂದು ಸಲ ವಿಫಲಗೊಂಡ ಸಂಜು ಸ್ಯಾಮ್ಸನ್ 10 ರನ್‌ಗೆ ಸೀಮಿತಗೊಂಡರು. ಅಭಿಷೇಕ್ ಶರ್ಮಾ ಅಬ್ಬರಿಸುವ ಸುಳಿವುಕೊಟ್ಟರೂ 15 ರನ್ ಹಾಗೂ ಸೂರ್ಯಕುಮಾರ್ ಯಾದವ್‌ ಕೇವಲ 8 ರನ್‌ಗೆ ಔಟಾದರು. 41 ರನ್‌ಗೆ 3 ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಆತಂಕ ಸೃಷ್ಟಿಯಾಯಿತು. ಆದರೆ, ಈ ಬಳಿಕ ಜತೆಯಾದ ನಿತಿಶ್ ರೆಡ್ಡಿ ಹಾಗೂ ರಿಂಕು ಸಿಂಗ್ ಬಾಂಗ್ಲಾ ಬೌಲರ್‌ಗಳ ಯೋಜನೆಗಳನ್ನು ವಿಫಲಗೊಳಿಸಿದರು. ಮೈದಾದ ಉದ್ದಕ್ಕೂ ಚೆಂಡುಗಳನ್ನು ಅಟ್ಟಿದ ಅವರು 108 ರನ್‌ಗಳ ಜತೆಯಾಟವಾಡಿದರು. ಅವರ ಆಟದಿಂದ ಭಾರತದ ಸ್ಕೋರ್ ಗಳಿಕೆ ವೇಗ ಹೆಚ್ಚಾಯಿತು. ಬಳಿಕ ಹಾರ್ದಿಕ್ ಪಾಂಡ್ಯ 32 ರನ್ ಬಾರಿಸಿದರೆ ರಿಯಾನ್ ಪರಾಗ್ 15 ರನ್ ಕೊಡುಗೆ ಕೊಟ್ಟರು. ಸತತವಾಗಿ ಓವರ್‌ಗೆ 10ಕ್ಕಿಂತಲೂ ಹೆಚ್ಚು ಸರಾಸರಿ ಕಾಪಾಡಿಕೊಂಡ ಭಾರತ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿಯನ್ನು ಒಡ್ಡಿತು.