ಚೆನ್ನೈ: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿದ್ದ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ(jasprit bumrah) ನಾಳೆಯಿಂದ(ಗುರುವಾರ) ಆರಂಭಗೊಳ್ಳಲಿರುವ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಮೈಲುಗಲ್ಲೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ.
ಬುಮ್ರಾ ಬಾಂಗ್ಲಾ ವಿರುದ್ಧ ಕೇವಲ ಮೂರು ವಿಕೆಟ್ ಕಡೆವಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಆಗ ಅವರು ಈ ಸಾಧನೆ ಮಾಡಿದ ಭಾರತದ 10ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ದಿಗ್ಗಜರಾದ ಕಪಿಲ್ ದೇವ್, ಜಾಹಿರ್ ಖಾನ್, ಜಾವಗಲ್ ಶ್ರೀನಾಥ್ ಜತೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ. ಬುಮ್ರಾ ಏಕದಿನದಲ್ಲಿ 149, ಟೆಸ್ಟ್‌ನಲ್ಲಿ159 ಮತ್ತು ಟಿ20ಯಲ್ಲಿ 89 ವಿಕೆಟ್ ಕಿತ್ತು ಮೂರು ಮಾದರಿಯಿಂದ 397 ವಿಕೆಟ್ ಕಲೆಹಾಕಿದ್ದಾರೆ.
ಜಡೇಜಾ ಬಾಂಗ್ಲಾ ವಿರುದ್ಧ 6 ವಿಕೆಟ್ ಉರುಳಿಸಿದರೆ 300 ವಿಕೆಟ್ ಕೆಡವಿದ ಭಾರತದ 6ನೇ ಬೌಲರ್ ಎಂಬ ದಾಖಲೆ ಬರೆಯಲಿದ್ದಾರೆ. ಸದ್ಯ ಜಡೇಜಾ 72 ಟೆಸ್ಟ್ ಪಂದ್ಯವನ್ನಾಡಿ 294* ವಿಕೆಟ್ ಕಿತ್ತಿದ್ದಾರೆ. 300 ವಿಕೆಟ್ ಕೀಳುತ್ತಿದ್ದಂತೆ ಮತ್ತೊಂದು ದಾಖಲೆಯನ್ನು ಕೂಡ ಜಡೇಜಾ ತಮ್ಮ ಹೆಸರಿಗೆ ಸೇರಿಕೊಳ್ಳಲಿದ್ದಾರೆ. 300 ಪ್ಲಸ್ ವಿಕೆಟ್ ಮತ್ತು 3 ಸಾವಿರ ರನ್ ಪೂರ್ತಿಗೊಳಿಸಿದ ವಿಶ್ವದ 11ನೇ, ಭಾರತದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಉಳಿದಿಬ್ಬರೆಂದರೆ ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ನಾಯಕ ಕಪಿಲ್‌ದೇವ್ ಮತ್ತು ಆರ್. ಅಶ್ವಿನ್.
ಅಶ್ವಿನ್ ಬಾಂಗ್ಲಾ ವಿರುದ್ಧ 2 ವಿಕೆಟ್ ಕಿತ್ತರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಟದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇನ್ನು 14 ವಿಕೆಟ್ ಪಡೆದರೆ ನಥನ್ ಲಿಯೋನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ. ಸದ್ಯ ಅಶ್ವಿನ್ 35 ಟೆಸ್ಟ್ ಪಂದ್ಯಗಳಲ್ಲಿ 174 ವಿಕೆಟ್ ಪಡೆದಿದ್ದಾರೆ. ಅಗ್ರಸ್ಥಾನಿ ಲಿಯೋನ್ 43 ಟೆಸ್ಟ್ ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ಯಾಟ್ ಕಮಿನ್ಸ್ 42 ಟೆಸ್ಟ್ ಪಂದ್ಯ ಪಂದ್ಯಗಳಿಂದ 175 ವಿಕೆಟ್ ಕಿತ್ತಿದ್ದಾರೆ.
ಭಾರತ ಪರ ಭರ್ತಿ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ 516 ವಿಕೆಟ್ ಕಿತ್ತು ಭಾರತ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಕಿತ್ತ ಕನ್ನಡಿಗ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಅಶ್ವಿನ್ 9ನೇ ಸ್ಥಾನಿಯಾಗಿದ್ದಾರೆ.
ಇದನ್ನೂ ಓದಿ IND vs BAN: ಮೊದಲ ಟೆಸ್ಟ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ವರದಿ ಹೀಗಿದೆ
ಸಿಕ್ಸರ್ ದಾಖಲೆ ಸನಿಹ ಜೈಸ್ವಾಲ್
ಜೈಸ್ವಾಲ್ ಈ ಟೆಸ್ಟ್ ಸರಣಿಯಲ್ಲಿ ಕೇವಲ 8 ಸಿಕ್ಸರ್ ಬಾರಿಸಿದರೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನ್ಯೂಜಿಲ್ಯಾಂಡ್ ತಂಡದ ಮಾಜಿ ಸ್ಫೋಟಕ ಬ್ಯಾಟರ್, ಹಾಲಿ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿದೆ. ಮೆಕಲಮ್ 2014 ರಲ್ಲಿ 9 ಟೆಸ್ಟ್ ಪಂದ್ಯಗಳಿಂದ 33 ಸಿಕ್ಸರ್ ಬಾರಿಸಿದ್ದರು. ಸದ್ಯ ಜೈಸ್ವಾಲ್ ಕ್ಯಾಲೆಂಡರ್ ವರ್ಷದಲ್ಲಿ 6 ಟೆಸ್ಟ್ ಪಂದ್ಯಗಳನ್ನಾಡಿ 26 ಸಿಕ್ಸರ್ ಬಾರಿಸಿದ್ದಾರೆ. 8 ಸಿಕ್ಸರ್ ಬಾರಿಸಿದರೆ 10 ವರ್ಷಗಳ ಹಿಂದೆ ಮೆಕಲಮ್ ನಿರ್ಮಿಸಿದ್ದ ದಾಖಲೆ ಪತನಗೊಳ್ಳಲಿದೆ. ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜೈಸ್ವಾಲ್ ಸದ್ಯ 13ನೇ ಸ್ಥಾನಿಯಾಗಿದ್ದಾರೆ. 29 ಸಿಕ್ಸರ್ ಬಾರಿಸಿದ್ದಾರೆ.