Saturday, 21st September 2024

IND vs BAN: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ಅಶ್ವಿನ್‌

IND vs BAN

ಚೆನ್ನೈ: ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿ ಹಲವು ದಾಖಲೆ ನಿರ್ಮಿಸಿದ್ದ ಟೀಮ್‌ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್‌ ಆರ್‌. ಅಶ್ವಿನ್‌(R Ashwin) ಇದೀಗ ಬೌಲಿಂಗ್‌ ಮೂಲಕವೂ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಬಾಂಗ್ಲಾ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿ 2 ವಿಕೆಟ್‌ ಕೀಳುವ ಮೂಲಕ ಆಸ್ಟ್ರೇಲಿಯಾದ ವೇಗಿ ಪ್ಯಾಟ್‌ ಕಮಿನ್ಸ್‌(Pat Cummins) ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಅಶ್ವಿನ್‌ 2 ವಿಕೆಟ್‌ ಕೀಳುತ್ತಿದ್ದಂತೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ವಿಶ್ವದ 2ನೇ ಬೌಲರ್‌ ಎನಿಸಿಕೊಂಡರು. ಅಶ್ವಿನ್‌ ಸದ್ಯ 176* ವಿಕೆಟ್‌ ಕೆಡವಿದ್ದಾರೆ. ಪ್ಯಾಟ್‌ ಕಮಿನ್ಸ್‌ 42 ಟೆಸ್ಟ್ ಪಂದ್ಯಗಳಿಂದ 175 ವಿಕೆಟ್ ಕಿತ್ತಿದ್ದಾರೆ. ಅತ್ಯಧಿಕ ವಿಕೆಟ್‌ ಕಿತ್ತ ದಾಖಲೆ ಆಸೀಸ್‌ ಸ್ಪಿನ್ನರ್‌ ನಥನ್‌ ಲಿಯೋನ್‌ ಹೆಸರಿನಲ್ಲಿದೆ. 43 ಟೆಸ್ಟ್ ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಶ್ವಿನ್ 133 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಬೌಂಡರಿ ಸಹಿತ 113 ರನ್ ಬಾರಿಸಿದ್ದರು. ಈ ಸೆಂಚುರಿಯೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ 2 ಶತಕ ಹಾಗೂ ಮೂರಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ಆರ್​. ಅಶ್ವಿನ್​ ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ IND vs BAN: ಕೊಹ್ಲಿಯ ದಾಖಲೆ ಮುರಿದ ಶುಭಮನ್‌ ಗಿಲ್‌

ಟೆಸ್ಟ್ ಕ್ರಿಕೆಟ್​ನಲ್ಲಿ 8ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಲ ಕ್ರಮಾಂಕದಲ್ಲಿ ಆಡಲಿಳಿದು ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ಸರಿಗಟ್ಟಲು ಅಶ್ವಿನ್​ಗೆ ಇನ್ನು ಒಂದು ಶತಕದ ಅವಶ್ಯಕತೆಯಿದೆ. ಈ ಪಟ್ಟಿಯಲ್ಲಿ ಕಿವೀಸ್‌ನ ಮಾಜಿ ಆಟಗಾರ ಡೇನಿಯಲ್ ವೆಟ್ಟೋರಿ ಅಗ್ರಸ್ಥಾನದಲ್ಲಿದ್ದಾರೆ. ಅಶ್ವಿನ್‌ ಕಾನ್ಪುರ ಟೆಸ್ಟ್‌ನಲ್ಲಿ ಈ ದಾಖಲೆ ಮುರಿಯುವ ಅವಕಾಶವಿದೆ. 38 ರ ಹರಯದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 20-ಪ್ಲಸ್ ಅರ್ಧಶತಕಗಳ ಜತೆಗೆ 30 ಪ್ಲಸ್ ಐದು ವಿಕೆಟ್‌ಗಳನ್ನು ದೀರ್ಘ ಸ್ವರೂಪದ ಕ್ರಿಕೆಟ್ ನಲ್ಲಿ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಕೊಹ್ಲಿ ದಾಖಲೆ ಮುರಿದ ಗಿಲ್‌

ಶುಭಮನ್‌ ಗಿಲ್‌ 176 ಎಸೆತಗಳಿಂದ 10 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ಅಜೇಯ 119ರನ್‌ ಬಾರಿಸಿದರು. ಇದು ಗಿಲ್‌ ಅವರ 5ನೇ ಟೆಸ್ಟ್‌ ಶತಕವಾಗಿದೆ. ಈ ಶತಕದೊಂದಿಗೆ ಶುಭಮನ್‌ ಗಿಲ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಅತ್ಯಧಿಕ ಶತಕ ಬಾರಿಸಿದ 2ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಇದುವರೆಗೆ ಈ ದಾಖಲೆ ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ(4 ಶತಕ) ಹೆಸರಿನಲ್ಲಿತ್ತು. ಅಗ್ರಸ್ಥಾನದಲ್ಲಿ ನಾಯಕ ರೋಹಿತ್‌ ಶರ್ಮ ಕಾಣಿಸಿಕೊಂಡಿದ್ದಾರೆ. ರೋಹಿತ್‌ 9 ಶತಕ ಬಾರಿಸಿದ್ದಾರೆ. ಒಟ್ಟಾರೆ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಇಂಗ್ಲೆಂಡ್‌ನ ಜೋ ರೂಟ್‌ಗೆ ಸಲ್ಲುತ್ತದೆ. ರೂಟ್‌ 16 ಶತಕ ಬಾರಿಸಿದ್ದಾರೆ.