Sunday, 24th November 2024

IND vs NZ: ಈ ಆಟಗಾರನಿಂದಲೇ ನ್ಯೂಜಿಲೆಂಡ್‌ ಎದುರು ಟೆಸ್ಟ್‌ ಸರಣಿ ಸೋತಿದ್ದೇವೆಂದ ಆರ್‌ ಅಶ್ವಿನ್‌!

IND vs NZ: ʼI Am A Big Reasonʼ-R Ashwin's Honest Reaction about India's White Wash loss against New Zealand

ನವದೆಹಲಿ: ನ್ಯೂಜಿಲೆಂಡ್‌ ವಿರುದ್ದ (IND vs NZ) ತವರು ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 3-0 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಲು ಕಾರಣವೇನೆಂದು ಟೀಮ್‌ ಇಂಡಿಯಾ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಬಹಿರಂಗಪಡಿಸಿದ್ದಾರೆ. ಭಾರತ ತಂಡ ಕಳೆದ 12 ವರ್ಷಗಳಿಂದ ತವರಿನಲ್ಲಿ ಸತತ 18 ಟೆಸ್ಟ್‌ ಸರಣಿಗಳನ್ನು ಗೆದ್ದು ದಾಖಲೆ ಬರೆದಿತ್ತು. ಆದರೆ, ಕಿವೀಸ್‌ ಎದುರು ಸೋಲುವ ಮೂಲಕ ಗೆಲುವಿನ ಓಟವನ್ನು ನಿಲ್ಲಿಸಿದೆ. ಈ ಸೋಲಿನಿಂದ ಭಾರತ ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು.

ಅಲ್ಲದೆ ತವರಿನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ ವೈಟ್‌ವಾಷ್‌ ಆಘಾತ ಅನುಭವಿಸಿರುವುದು ಇದೇ ಮೊದಲು. ನನ್ನ ಟೆಸ್ಟ್‌ ವೃತ್ತಿ ಜೀವನದಲ್ಲಿ ಅತ್ಯಂತ ಕೆಟ್ಟ ತವರು ಟೆಸ್ಟ್‌ ಸರಣಿ ಇದಾಗಿದೆ. ಈ ಸರಣಿಯಲ್ಲಿ ನಾನು ಆಡಿದ ಮೂರು ಪಂದ್ಯಗಳಿಂದ ಕೇವಲ 9 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದೇನೆ ಎಂದು ಅಶ್ವಿನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, ನ್ಯೂಜಿಲೆಂಡ್‌ ಎದುರು ಭಾರತ ತಂಡ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ತಾನು ಕೆಳ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದೇನೆ ಹಾಗೂ ವಿಕೆಟ್‌ಗಳನ್ನು ಕಬಳಿಸುವಲ್ಲಿಯೂ ಎಡವಿದ್ದೇನೆ. ಈ ದೊಡ್ಡ ಕಾರಣದಿಂದಲೇ ನಾವು ಟೆಸ್ಟ್‌ ಸರಣಿಯಲ್ಲಿ ಸೋಲು ಅನುಭವಿಸಬೇಕಾಗಿದೆ ಎಂದು ಟೀಮ್‌ ಇಂಡಿಯಾ ಸ್ಪಿನ್‌ ಆಲ್‌ರೌಂಡರ್‌ ತಿಳಿಸಿದ್ದಾರೆ.

“ನ್ಯೂಜಿಲೆಂಡ್‌ ಎದುರು ನಾವು 0-3 ಅಂತರದಲ್ಲಿ ಸೋಲು ಅನುಭವಿಸಿದ್ದೇವೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿಯೇ ಭಾರತ ತಂಡ ಹಿಂದೆಂದೂ ಈ ರೀತಿ ಸೋತಿಲ್ಲ ಎಂಬುದನ್ನು ನಾನು ಓದಿದ್ದೇನೆ. ಈ ಸೋಲಿನ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬುದು ನನಗೆ ಗೊತ್ತಿಲ್ಲ. ನನ್ನ ವೃತ್ತಿ ಜೀವನದಲ್ಲಿ ಹಾಗೂ ನನ್ನ ಅನುಭವದಲ್ಲಿ ನಾವು ಪಂದ್ಯವನ್ನು ಆಡುವಾಗ ಸಾಕಷ್ಟು ಭಾವನೆಗಳು ಇರುತ್ತವೆ. ಆದರೆ ಇದು ತುಂಬಾ ಒಡೆದುಹಾಕುವ ಅನುಭವ. ಇದಕ್ಕೆ ಸೂಕ್ತ ಪದ ಇದಾಗಿದೆ. ಕಳೆದ 2-3 ದಿನಗಳಿಂದ ಈ ಸೋಲಿನ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ನನಗೆ ತಿಳಿದಿರಲಿಲ್ಲ,” ಎಂದು ಆರ್‌ ಅಶ್ವಿನ್‌ ಹೇಳಿದ್ದಾರೆ.

ಕಿವೀಸ್‌ ವಿರುದ್ಧ ಟೆಸ್ಟ್‌ ಸರಣಿ ಸೋಲಲು ನಾನೇ ಕಾರಣ

“ನನ್ನ ಕಡೆಯಿಂದ ನಾನು ಸಾಕಷ್ಟು ಸಂಗತಿಗಳನ್ನು ನಿರೀಕ್ಷೆ ಮಾಡಿದ್ದೆ. ಭಾರತ ತಂಡ ಸೋಲು ಅನುಭವಿಸಲು ಪ್ರಮುಖ ಕಾರಣ ನಾನೇ ಆಗಿದ್ದೇನೆ. ಈ ಸರಣಿಯಲ್ಲಿ ಟೀಮ್‌ ಇಂಡಿಯಾ ವೈಟ್‌ವಾಷ್‌ ಸೋಲು ಅನುಭವಿಸಲು ಕೂಡ ನಾನೇ ಕಾರಣ. ಕೆಳ ಕ್ರಮಾಂಕದಲ್ಲಿ ನಾನು ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಬೌಲರ್‌ ಆಗಿ ಆ ರನ್‌ಗಳು ಎಷ್ಟು ಮುಖ್ಯ ಎಂಬುದು ನನಗೆ ತಿಳಿದಿದೆ. ಹಲವು ಕಡೆಗಳಲ್ಲಿ ನಾನು ಉತ್ತಮ ಆರಂಭವನ್ನು ಪಡೆದಿದ್ದೆ. ಆದರೆ, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡವಿದ್ದೇನೆ. ನಾನು ನನ್ನ ಕಡೆಯಿಂದ ಉತ್ತಮವಾದುದನ್ನು ನೀಡಿದ್ದೇನೆ ಆದರೆ, ಇದು ಸಾಲದು,” ಎಂದು ಸ್ಪಿನ್‌ ಆಲ್‌ರೌಂಡರ್‌ ಬೇಸರ ವ್ಯಕ್ತಪಡಿಸಿದ್ದಾರೆ.

6 ಇನಿಂಗ್ಸ್‌ಗಳಿಂದ 51 ರನ್‌ ಗಳಿಸಿದ್ದ ಅಶ್ವಿನ್‌

ಬಾಂಗ್ಲಾದೇಶ ಟೆಸ್ಟ್‌ ಸರಣಿಯಲ್ಲಿ ಆರ್‌ ಅಶ್ವಿನ್‌ ತಮ್ಮ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು. ಅವರು ಚೆನ್ನೈ ಟೆಸ್ಟ್‌ನಲ್ಲಿ ಶತಕವನ್ನು ಸಿಡಿಸಿದ್ದರು. ಆ ಮೂಲಕ ಇದೇ ಲಯವನ್ನು ಅವರು ನ್ಯೂಜಿಲೆಂಡ್‌ ವಿರುದ್ಧವೂ ಮುಂದುವರಿಸಲಿದ್ದಾರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕಿವೀಸ್‌ ಟೆಸ್ಟ್‌ ಸರಣಿಯಲ್ಲಿ ಸೋಲು ಅನುಭವಿಸಿದ್ದರು. ಅವರು ಆಡಿದ್ದ 6 ಇನಿಂಗ್ಸ್‌ಗಳಿಂದ ಕೇವಲ 51 ರನ್‌ಗಳಿಗೆ ಸೀಮಿತರಾಗಿದ್ದರು.