Tuesday, 19th November 2024

IND vs NZ 2nd Test: ದ್ವಿತೀಯ ಟೆಸ್ಟ್‌ಗೂ ಕೇನ್ ವಿಲಿಯಮ್ಸನ್ ಅಲಭ್ಯ

ಪುಣೆ: ಅಕ್ಟೋಬರ್ 24 ರಿಂದ ಪುಣೆಯಲ್ಲಿಆರಂಭವಾಗುವ ಭಾರತ ಮತ್ತು ನ್ಯೂಜಿಲೆಂಡ್(New Zealand) ನಡುವಿನ ಎರಡನೇ ಟೆಸ್ಟ್(IND vs NZ 2nd Test) ಪಂದ್ಯಕ್ಕೂ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್(Kane Williamson) ಅಲಭ್ಯರಾಗಿದ್ದಾರೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ತೊಡೆಸಂದು ನೋವಿನಿಂದ ಬಳಲುತ್ತಿರುವ ಅವರು ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ಅವರು ದ್ವಿತೀಯ ಟೆಸ್ಟ್‌ ಲಭ್ಯವಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ವಿಲ್ ಯಂಗ್ ಅವರನ್ನು ಆಡಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಯಂಗ್‌ 33 ಮತ್ತು 48 ರನ್ ಗಳಿಸಿದ್ದರು. ಇದೀಗ ದ್ವಿತೀಯ ಟೆಸ್ಟ್‌ನಲ್ಲಿಯೂ ಯಂಗ್‌ ತಂಡದಲ್ಲಿ ಮುಂದುವರಿಯಲಿದ್ದಾರೆ.

“ನಾವು ಕೇನ್ ಅವರನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅವರು ಇನ್ನೂ ಶೇ. 100ರಷ್ಟು ಫಿಟ್ ಆಗಿಲ್ಲ. ಮೂರನೇ ಟೆಸ್ಟ್‌ಗೆ ಅವರ ಸೇವೆ ತಂಡಕ್ಕೆ ಲಭ್ಯವಾಗುವ ಭರವಸೆ ಹೊಂದಿದ್ದೇವೆ” ಎಂದು ತಂಡದ ಮುಖ್ಯ ಕೋಚ್‌ ಗ್ಯಾರಿ ಸ್ಟೇಡ್ ಹೇಳಿದ್ದಾರೆ.

ಇದನ್ನೂ ಓದಿ IND vs NZ 2nd Test: ಕಿವೀಸ್‌ ಟೆಸ್ಟ್‌ನಿಂದ ರಿಷಭ್‌ ಪಂತ್‌ ಔಟ್‌?

ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿರುವ ಭಾರತ ಸರಣಿ ಜೀವಂತವಿರಿಸಬೇಕಿದ್ದರೆ ಪುಣೆ ಟೆಸ್ಟ್‌ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಪುಣೆಯಲ್ಲಿ ಭಾರತ ಈವರೆಗೆ ಕೇವಲ 2 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ತಲಾ ಒಂದು ಸೋಲು ಮತ್ತು ಗೆಲುವು ಕಂಡಿದೆ.  2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 333 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದ್ದ ಭಾರತ, 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಗೆಲುವು ಸಾಧಿಸಿತ್ತು.

ಪಂತ್‌ ಕೂಡ ಅನುಮಾನ

ಮೊಣಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ರಿಷಭ್‌ ಪಂತ್‌(Rishabh Pant) ಕೂಡ ದ್ವಿತೀಯ ಟೆಸ್ಟ್‌ ಆಡುವುದು ಅನುಮಾನ ಎನ್ನಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ ಪಂತ್‌ಗೆ ದ್ವಿತೀಯ ಟೆಸ್ಟ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕವಾಗಿದೆ. ಬೆಂಗಳೂರು ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ವೇಳೆ ರವೀಂದ್ರ ಜಡೇಜಾ(Ravindra Jadeja) ಬೌಲ್ ಮಾಡಿದ ಚೆಂಡು ಸ್ಪಿನ್ ಆಗಿ ನೇರವಾಗಿ ಶಸ್ತ್ರಚಿಕಿತ್ಸೆ ಆಗಿದ್ದ ಮೊಣಕಾಲಿನ ಚಿಪ್ಪಿಗೆ ಬಡಿದಿತ್ತು. ತೀವ್ರ ನೋವಿನಿಂದ ನರಳಾಡಿದ್ದ ಪಂತ್‌ ಬಳಿಕ ವೈದಕೀಯ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ನೋವಿನ ಮಧ್ಯೆ ಬ್ಯಾಟಿಂಗ್‌ ಮಾತ್ರ ನಡೆಸಿದ್ದರು.

ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್‌ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್),ಡೆವೊನ್ ಕಾನ್ವೆ, ಡೆರಿಲ್ ಮಿಚೆಲ್,ವಿಲ್ ಓರೊರ್ಕ್,ಅಜಾಜ್ ಪಟೇಲ್,ಗ್ಲೆನ್ ಪಿಲಿಪ್ಸ್,ರಚಿನ್ ರವೀಂದ್ರ,ಮಿಚೆಲ್ ಸ್ಯಾಂಟ್ನರ್,ಬೆನ್ ಸೀರ್ಸ್,ಟಿಮ್ ಸೌಥಿ,ವಿಲ್ ಯಂಗ್, ಐಶ್ ಸೋಧಿ, ಮಾರ್ಕ್ ಚಾಪ್‌ಮನ್.