Thursday, 24th October 2024

IND vs NZ Test : ಸುಂದರ್‌ಗೆ 7 ವಿಕೆಟ್‌; ನ್ಯೂಜಿಲ್ಯಾಂಡ್‌ 259 ರನ್‌ಗಳಿಗೆ ಆಲ್ಔಟ್‌

IND vs NZ Test

ಪುಣೆ: ವಾಷಿಂಗ್ಟನ್ ಸುಂದರ್ ಅವರ ಜೀವನ ಶ್ರೇಷ್ಠ ಸಾಧನೆಯಿಂದ (7 ವಿಕೆಟ್‌, 59 ರನ್) ಮಿಂಚಿದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ (IND vs NZ Test) ತಂಡವನ್ನು 259 ರನ್‌ಗಳಿಗೆ ಆಲ್ಔಟ್ ಆಗಿದೆ. ಈ ಮೂಲಕ ಭಾರತ ತಂಡದ ಮ್ಯಾನೇಜ್ಮೆಂಟ್‌ ಅವರನ್ನು ಏಕಾಏಕಿ ತಂಡಕ್ಕೆ ಸೇರಿಸಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಬಳಿಕ ಮೊದಲ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ತಂಡ 1 ವಿಕೆಟ್ ಕಳೆದುಕೊಂಡು 16 ರನ್ ಬಾರಿಸಿದೆ. ರೋಹಿತ್‌ ಶರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡವು ಆಡುವ ಬಳಗವನ್ನು ಘೋಷಿಸಿದಾಗ ಅಚ್ಚರಿಯಾಗಿತ್ತು. ಸ್ಪಿನ್ನರ್‌ ಕುಲ್ದೀಪ್ ಯಾದವ್ ಹೊರಗಿಟ್ಟು ವಾಷಿಂಗ್ಟನ್ ಸುಂದರ್ ಗೆ ಅವಕಾಶ ನೀಡಲಾಗಿತ್ತು. ಬೆಳಗ್ಗಿನ ಅವಧಿಯಲ್ಲಿ ಈ ಬಗ್ಗೆ ನಾಯಕ ರೋಹಿತ್ ಹಾಗೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ಟೀಕೆಗಳು ಬಂದವು. ಆದರೆ, ನಂತರದಲ್ಲಿ ಎಲ್ಲರೂ ತಣ್ಣಗಾದರು.

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ ಭಾರತ ಸ್ಪಿನ್‌ಗೆ ಬಳಲಿತು. ಎಲ್ಲ 10 ಬ್ಯಾಟರ್‌ಗಳು ಸ್ಪಿನ್‌ ದಾಳಿಗೆ ವಿಕೆಟ್‌ ಒಪ್ಪಿಸಿದರು. ಸುಂದರ್‌ 7 ವಿಕೆಟ್‌ ಕಬಳಿಸಿದರೆ, ಆರ್‌ ಅಶ್ವಿನ್‌ ಉಳಿದ 3 ವಿಕೆಟ್‌ ಪಡೆದರು. ಆರಂಭಿಕ ಮೂರು ವಿಕೆಟ್‌ ಅಶ್ವಿನ್‌ ಕಬಳಿಸಿದರೆ, ನಂತರದ ಏಳು ವಿಕೆಟ್‌ಗಳು ಸುಂದರ್‌ ಪಾಲಾದವು. ವಾಷಿಂಗ್ಟನ್‌ ಸುಂದರ್‌ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನ ಉತ್ತಮ ದಾಖಲೆ ಮಾಡಿದರು.

ವಾಷಿಂಗ್ಟನ್ ಸುಂದರ್ ರಚಿನ್ ರವೀಂದ್ರ ವಿಕೆಟ್‌ ಕಬಳಿಸುವುದರೊಂದಿಗೆ ಮೊದಲ ಯಶಸ್ಸು ಪಡೆದರು. ನಂತರ ಟಾಮ್ ಬ್ಲಂಡೆಲ್, ಡೇರಿಲ್‌ ಮಿಚೆಲ್‌, ಗ್ಲೆನ್ ಫಿಲಿಪ್ಸ್ ಅವರಂತಹ ಸಮರ್ಥ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು. ಟಿಮ್ ಸೌಥಿಯನ್ನು ಬೌಲ್ಡ್ ಮಾಡಿದ ತಕ್ಷಣ, ಆಫ್ ಸ್ಪಿನ್ನರ್ ಟೆಸ್ಟ್‌ನಲ್ಲಿ ತನ್ನ ಮೊದಲ ಐದು ವಿಕೆಟ್‌ ಗೊಂಚಲಿನ ಸಾಧನೆ ಮಾಡಿದರ. ಸುಂದರ್‌ ಪಡೆದ ಏಳು ವಿಕೆಟ್‌ಗಳ ಪೈಕಿ ಐವರು ಕ್ಲೀನ್‌ ಬೋಲ್ಡ್‌ ಆದರು.

ಐದು ವಿಕೆಟ್‌ ಸಾಧನೆಯೊಂದಿಗೆ ಸುಂದರ್‌ ಹಲವು ದಾಖಲೆಗಳನ್ನು ಮಾಡಿದ್ದಾರೆ. ಪುಣೆ ಸ್ಟೇಡಿಯಂನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದು ವಿಕೆಟ್‌ ಪಡೆದ ಮೊದಲ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನ್ಯೂಜಿಲೆಂಡ್‌ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಡಿವೋನ್‌ ಕಾನ್ವೆ 76 ರನ್‌ ಗಳಿಸಿದರು. ಕಿವೀಸ್‌ ಬಳಗದ ಗರಿಷ್ಠ ಮೊತ್ತ ಇದು. ಉಳಿದಂತೆ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಚಿನ್‌ ರವೀಂದ್ರ 65 ರನ್‌ ಗಳಿಸಿದರು. ಕೊನೆಯ ಹಂತದಲ್ಲಿ ಸಿಡಿದ ಮಿಚೆಲ್‌ ಸ್ಯಾಂಟ್ನರ್‌ 33 ರನ್‌ ಗಳಿಸಿದರು. ಮಿಚೆಲ್‌ ಹಾಗೂ ಯಂಗ್‌ ತಲಾ 18 ರನ್‌ ಪೇರಿಸಿದರು.