Sunday, 24th November 2024

IND vs NZ: ಮಳೆ ನಿಂತ 7 ನಿಮಿಷದಲ್ಲಿ ಪಂದ್ಯ ಆರಂಭ; ಚಿನ್ನಸ್ವಾಮಿಯಲ್ಲಿ ಮಾತ್ರ ಇದು ಸಾಧ್ಯ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಇಂದು ಆರಂಭವಾಗಬೇಕಿದ್ದ ಭಾರತ ಹಾಗೂ ನ್ಯೂಜಿಲೆಂಡ್‌(IND vs NZ) ನಡುವಿನ ಮೊದಲ ಪಂದ್ಯಕ್ಕ್ಕೆಕೂ ಅಡ್ಡಿಪಡಿಸಿದೆ. ಮಳೆಯಿಂದ ಟಾಸ್‌ ಪ್ರಕ್ರಿಯೆ ಕೂಡ ವಿಳಂಬವಾಗಿದೆ. ಗುರುವಾರವೂ ಶೇ.90ರಷ್ಟು ಮಳೆ ಬೀಳುವ ನಿರೀಕ್ಷೆಯಿದೆ. ಇದು ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಎರಡೂ ದಿನಗಳ ಆಟ ರದ್ದಾದರೂ ಅಚ್ಚರಿಯಿಲ್ಲ. ಒಂದೊಮ್ಮೆ ಮಳೆ ನಿಂತರೆ 7 ನಿಮಿಷದಲ್ಲಿ ಮೈದಾನವನ್ನು ಪಂದ್ಯಕ್ಕೆ ಸಿದ್ಧಪಡಿಸಬಹುದು. ಇದಕ್ಕೆ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ(m chinnaswamy) ಅತ್ಯುತ್ತಮ ಮಟ್ಟದಿಂದ ಕೂಡಿದ ಸಬ್‌ ಏರ್‌ ಸಿಸ್ಟಮ್‌(Sub-Air facility) ತಂತ್ರಜ್ಞಾನ.

4.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಬ್‌ ಏರ್‌ ಸಿಸ್ಟಮ್‌ ವ್ಯವಸ್ಥೆಯಿಂದಾಗಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಚಿನ್ನಸ್ವಾಮಿಯಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ.

ಸಬ್‌ ಏರ್‌ ಸಿಸ್ಟಮ್‌ ಯಂತ್ರವನ್ನು ನಿಭಾಯಿಸಲು ಕೆಎಸ್‌ಸಿಎ ಕ್ಯುರೇಟರ್‌ಗಳಿಗೂ ವಿಶೇಷ ತರಬೇತಿ ನೀಡಲಾಗಿದೆ. ಮೈದಾನದ ಕೆಲವೆಡೆ ರಿಮೋಟ್‌ ಸೆನ್ಸರ್‌ಗಳನ್ನು ಕೂಡ ಅಳವಡಿಸಲಾಗಿದ್ದು, ಒಂದು ವೇಳೆ ಕ್ರೀಡಾಂಗಣದಲ್ಲಿ ಸಿಬ್ಬಂದಿ ಇಲ್ಲದಿರುವಾಗ ಅಥವಾ ಮಧ್ಯರಾತ್ರಿ ಮಳೆ ಸುರಿದರೆ ಮನೆಯಲ್ಲೇ ಕುಳಿತು ಯಂತ್ರಕ್ಕೆ ಚಾಲನೆಯನ್ನೂ ನೀಡಬಹುದಾಗಿದೆ.

ಇದನ್ನೂ ಓದಿ IND vs NZ: ಬೆಂಗಳೂರಿನ ಬಗ್ಗೆ ಕಿವೀಸ್‌ ಆಟಗಾರನ ಮನದಾಳದ ಮಾತು

2017ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ತಂತ್ರಜ್ಞಾನದ ಪರೀಕ್ಷಾರ್ಥ ಪ್ರದರ್ಶನದ ವೇಳೆ ಸುಮಾರು 5 ಸಾವಿರ ಲೀಟರ್‌ ನೀರನ್ನು ಮೈದಾನಕ್ಕೆ ಹಾಯಿಸಲಾಗಿತ್ತು. ಕೆಲವೇ ಸೆಕೆಂಡ್‌(32 ಸೆ.)ಗಳಲ್ಲಿ ಸಬ್‌ ಏರ್‌ ಸಿಸ್ಟಮ್‌ನ ಯಂತ್ರ ನೀರನ್ನು ಹೀರಿಕೊಂಡಿತ್ತು. ಹುಲ್ಲುಹಾಸಿನ ತಳಮಟ್ಟದಲ್ಲೂ ನೀರಿನ ಅಂಶ ಉಳಿಯದಂತೆ ಹೀರಿಕೊಂಡಿತ್ತು. ಆ ಮೂಲಕ ಎಷ್ಟೇ ಮಳೆ ಬಂದರೂ, ಮಳೆ ನಿಂತ ನಂತರ ಅತಿ ಶೀಘ್ರದಲ್ಲಿ ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಲು ತಾನು ಸಿದ್ಧ ಎಂಬುದನ್ನು ಸಬ್‌ ಏರ್‌ ಸಿಸ್ಟಮ್‌ ವ್ಯವಸ್ಥೆ ನಿರೂಪಿಸಿತ್ತು.

ಸಬ್‌ ಏರ್‌ ಸಿಸ್ಟಮ್‌ ವಿಶೇಷತೆ

1. ಮಳೆ ಆರಂಭವಾದ ಕ್ಷಣದಿಂದ ಪ್ರತಿ ನಿಮಿಷಕ್ಕೆ 10 ಸಾವಿರ ಲೀಟರ್‌ ವೇಗದಲ್ಲಿ ಈ ಯಂತ್ರ ಮೈದಾನದಿಂದ ನೀರನ್ನು ಹೀರಿಕೊಳ್ಳುತ್ತದೆ.

2. ಈ ಹಿಂದಿನ ಚರಂಡಿ ವ್ಯವಸ್ಥೆಗಿಂತ 36 ಪಟ್ಟು ವೇಗದಲ್ಲಿ ನೀರನ್ನು ಮೈದಾನದಿಂದ ಖಾಲಿ ಮಾಡುತ್ತದೆ.

3. ಎಷ್ಟೇ ಮಳೆಯಾದರೂ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಮೈದಾನ ಪಂದ್ಯಕ್ಕೆ ಸಜ್ಜು