ಬೆಂಗಳೂರು: ಬಹುನಿರೀಕ್ಷಿತ ಪ್ರವಾಸಿ ನ್ಯೂಜಿಲ್ಯಾಂಡ್(IND vs NZ) ಮತ್ತು ಭಾರತ ನಡುವಣ ಟೆಸ್ಟ್ ಸರಣಿ ಅ.16ರಿಂದ ಆರಂಭಗೊಳ್ಳಲಿದೆ. ಈ ಪಂದ್ಯ ನಗರದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್(IND vs NZ Test Tickets) ಇಂದಿನಿಂದ(ಶನಿವಾರ) ಆರಂಭಗೊಳ್ಳಲಿದೆ. ಟಿಕೆಟ್‌ಗಳನ್ನು ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡುವುದಾಗಿ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ.
ಟಿಕೆಟ್‌ಗೆ ಕನಿಷ್ಠ 600, ಗರಿಷ್ಠ 7500 ದರ ನಿಗದಿಪಡಿಸಲಾಗಿದೆ. ಟಿಕೆಟ್‌ಗಳನ್ನು ಸದ್ಯಕ್ಕೆ ಆನ್‌ಲೈನ್‌ನಲ್ಲಿ ಮಾತ್ರ ಮಾರಾಟಕ್ಕೆ ಇಡಲಾಗಿದ್ದು, ಬಾಕ್ಸ್ ಆಫೀಸ್ ಮಾರಾಟದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. www.insider.in ಅಥವಾ www.ksca.cricket ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳು ಲಭ್ಯವಿದೆ ಎಂದು ಕೆಎಸ್‌ಸಿಎ ತಿಳಿಸಿದೆ. ಎರಡು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವ ಕಾರಣ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಒಮ್ಮೆ ಟಿಕೆಟ್ ಖರೀದಿ ಮಾಡಿದರೆ 5 ದಿನ ವ್ಯಾಲಿಡಿಟಿ ಇರಲಿದೆ.
ನ್ಯೂಜಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್ ಸ್ಥಾನ ಬಹುತೇಕ ಖಾತ್ರಿಯಾಗಲಿದೆ. ಫೈನಲ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಕಿವೀಸ್‌ಗೆ ಸರಣಿ ಗೆಲ್ಲಲೇ ಬೇಕಾದ ಒತ್ತಡವಿದೆ. ಹೀಗಾಗಿ ಈ ಟೆಸ್ಟ್ ಸರಣಿ ಇತ್ತಂಡಗಳಿಗೂ ಬಹಳ ಪ್ರಾಮುಖ್ಯತೆ ಪಡೆದಿದೆ.
ಇದನ್ನೂ ಓದಿ IND vs PAK: ಪಾಕ್‌ಗೆ ಸಚಿವ ಜೈಶಂಕರ್ ಭೇಟಿ; ಚಾಂಪಿಯನ್ಸ್ ಟ್ರೋಫಿಗೆ ತೆರಳುತ್ತಾ ಭಾರತ?
ಮೊದಲ ಪಂದ್ಯ ಅಕ್ಟೋಬರ್ 16 ರಿಂದ 20 ರವರೆಗೆ ಬೆಂಗಳೂರಿನಲ್ಲಿ, ಎರಡನೇ ಪಂದ್ಯ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ, ಮೂರನೇ ಟೆಸ್ಟ್ ನವೆಂಬರ್ 1 ರಿಂದ 5ರ ತನಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶವನ್ನು ಹೆಚ್ಚಿಸಲು, ಭಾರತವು ತನ್ನ ಉಳಿದ 8 ಪಂದ್ಯಗಳಲ್ಲಿ ಕನಿಷ್ಠ ಆರನ್ನು ಗೆಲ್ಲಬೇಕು. ಹೀಗಾಗಿ ಮುಂದಿನ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದದ ಸರಣಿ ಅತ್ಯಂತ ಪ್ರಮುಖವಾಗಲಿದೆ. ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಸರಣಿಯನ್ನಾಡಲಿದೆ. ಇದನ್ನು ಕ್ಲೀನ್ ಸ್ವೀಪ್ ಮಾಡಿ, ಆಸೀಸ್ ಭಾರತ ವಿರುದ್ಧ ಸರಣಿ ಸೋತರೆ ಆಗ ಲಂಕಾಗೆ 2ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸುವ ಅವಕಾಶವೊಂದು ಸಿಗಲಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದೆ. ಫೈನಲ್ ಪಂದ್ಯವು ಜೂನ್ 11 ರಿಂದ 15 ರ ತನಕ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್ 16 ಮೀಸಲು ದಿನವಾಗಿದೆ. ಕ್ರಿಕೆಟ್ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯುತ್ತಿದೆ.