Sunday, 24th November 2024

IND vs NZ: ಕಿವೀಸ್‌ ವೇಗಿಗಳ ಬಿರುಗಾಳಿಗೆ ತತ್ತರಿಸಿದ ಭಾರತ

ಬೆಂಗಳೂರು: ನ್ಯೂಜಿಲ್ಯಾಂಡ್‌ನ(IND vs NZ) ತ್ರಿವಳಿ ವೇಗಿಗಳ ಬಿರುಗಾಳಿಗೆ ಭಾರತ ತತ್ತರಿಸಿ ಹೋಗಿದೆ. ಮಳೆಯ ಕಾರಣ ಬುಧವಾರ ಆರಂಭವಾಗಬೇಕಿದ್ದ ಪಂದ್ಯ ದ್ವಿತೀಯ ದಿನವಾದ ಗುರುವಾರ ಆರಂಭವಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಮುನ್ನವೇ ಕಿವೀಸ್‌ ಬೌಲರ್‌ಗಳು ಬೌನ್ಸರ್‌ ಎಸೆತಗಳ ಮೂಲಕ ಆಘಾತವಿಕ್ಕಿದ್ದಾರೆ. ಸದ್ಯ ಭಾರತ ಊಟದ ವಿರಾಮಕ್ಕೆ 34 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಆಪತ್ಬಾಂಧವ ರಿಷಭ್‌ ಪಂತ್‌ ಮತ್ತು ಕಳೆದ ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದ ಆರ್‌.ಅಶ್ವಿನ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಉಭಯ ಆಟಗಾರರೇ ಕುಸಿದ ತಂಡಕ್ಕೆ ಆಸರೆಯಾಗಬೇಕಿದೆ. ಬಾಂಗ್ಲಾ ವಿರುದ್ಧ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ರಾಹುಲ್‌ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್‌ ವೈಫಲ್ಯ ಮುಂದುವರಿಸಿದರು.

ಇದನ್ನೂ ಓದಿ IND vs NZ: ಮಳೆಗೆ ಕೊಚ್ಚಿ ಹೋದ ಮೊದಲ ದಿನದಾಟ

ರೋಹಿತ್‌ 2 ರನ್‌ ಗಳಿಸಿದರೆ, ವಿರಾಟ್‌ ಕೊಹ್ಲಿ ಮತ್ತು ರಾಹುಲ್‌ ಖಾತೆ ತೆರೆಯದೆ ಶೂನ್ಯ ಸುತ್ತಿದರು. ರಾಹುಲ್‌ಗೆ ತವರು ಮೈದಾನವಾಗಿದ್ದರೂ ಕೂಡ ಇದರ ಲಾಭವೆತ್ತಲು ಸಾಧ್ಯವಾಗಲಿಲ್ಲ. ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲಿ ರನ್‌ ಮಳೆಯನ್ನೇ ಸುರಿಸಿದ್ದ ಮುಂಬೈ ಬ್ಯಾಟರ್‌ ಸರ್ಫರಾಜ್‌ ಖಾನ್‌ ಕೂಡ ಖಾತೆ ತೆರೆಯದೆ ನಿರಾಸೆ ಮೂಡಿಸಿದರು. ಕುತ್ತಿಗೆ ನೋವಿಗೆ ತುತ್ತಾಗಿದ್ದ ಶುಭ್‌ಮನ್ ಗಿಲ್‌ಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಾಯಿತು. ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಕೂಡ ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. 63 ಎಸೆತ ಎದುರಿಸಿ ನಿಂತರೂ ಗಳಿಸಿದ್ದು 13 ರನ್‌. ಜಡೇಜಾ ಕೂಡ ಶೂನ್ಯಕ್ಕೆ ವಿಕೆಟ್‌ ಕೈಚೆಲ್ಲಿದರು. ಸದ್ಯ ವಿಲಿಯಂ ಒರ್ಕ(3), ಮ್ಯಾಟ್‌ ಹೆನ್ರಿ(2) ಮತ್ತು ಟಿಮ್‌ ಸೌಥಿ(1) ವಿಕೆಟ್‌ ಕೆಡವಿದ್ದಾರೆ.