Thursday, 12th December 2024

IND vs NZ: ಫಿಟ್‌ ಆದ ಪಂತ್‌; ಬ್ಯಾಟಿಂಗ್‌ ಓಕೆ, ಕೀಪಿಂಗ್‌ ಡೌಟ್‌

ಬೆಂಗಳೂರು: ನ್ಯೂಜಿಲ್ಯಾಂಡ್‌(IND vs NZ) ವಿರುದ್ಧದ ಮೊದಲ ಟೆಸ್ಟ್‌ನ 2ನೇ ದಿನದಾಟದ ವೇಳೆ ಚೆಂಡು ಬಡಿದು ಮೊಣಕಾಲಿಗೆ ಗಾಯ ಮಾಡಿಕೊಂಡು ಮೈದಾನ ತೊರೆದಿದ್ದ ರಿಷಭ್‌ ಪಂತ್‌ ಗಾಯದಿಂದ(Injured Rishabh Pant) ಚೇತರಿಕೆ ಕಂಡಿದ್ದು ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದ್ದಾರೆ.

ಪಂತ್‌ ಗಾಯದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಅಪ್‌ಡೇಟ್‌ ನೀಡಿದ್ದ ನಾಯಕ ರೋಹಿತ್‌, ʼಪಂತ್ ಮೊಣಕಾಲು ಊದಿಕೊಂಡಿದೆ. ಇದೇ ಮೊಣಕಾಲಿಗೆ ಪಂತ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಹೀಗಾಗಿ ಮುನ್ನೇಚ್ಚರಿಕೆಯ ಕ್ರಮವಾಗಿ ನಾವು ಅವರಿಗೆ ವಿಶ್ರಾಂತಿ ನೀಡಿದ್ದೇವೆ. ಸ್ವಲ್ಪ ಚೇತರಿಕೆಯ ಬಳಿಕ ಪಂತ್ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ ಎಂದಿದ್ದರು. ಸದ್ಯ ಪಂತ್‌ ಚೇತರಿಕೆ ಕಂಡಿದ್ದು ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದ್ದಾರೆ. ಅಭ್ಯಾಸದ ವಿಡಿಯೊ ವೈರಲ್‌ ಆಗಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಇದೆ. ಆದರೆ ಕೀಪಿಂಗ್‌ ನಡೆಸುವುದು ಅನುಮಾನ. ಧ್ರುವ್‌ ಜುರೇಲ್‌ ಅವರೇ ಕೀಪಿಂಗ್‌ ಮುಂದುವರಿಸಬಹುದು.

2022 ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸುಮಾರು 14 ತಿಂಗಳು ವಿಶ್ರಾಂತಿಯಲ್ಲಿದ್ದರು. ಅಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಕಾಲಿಗೆ ಚೆಂಡು ಬಡಿದು ಮತ್ತೆ ಗಾಯವಾಗಿದೆ.

ಇದನ್ನೂ ಓದಿ IND vs NZ: ಸೆಹವಾಗ್‌ ಸಿಕ್ಸರ್‌ ದಾಖಲೆ ಮುರಿದ ವೇಗಿ ಸೌಥಿ

ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ಇನಿಂಗ್ಸ್‌ನ 37ನೇ ಓವರ್‌ನ ಕೊನೆಯ ಎಸೆತದಲ್ಲಿ, ರವೀಂದ್ರ ಜಡೇಜಾ ಎಸೆದ ಚೆಂಡು ಪಂತ್ ಅವರ ಮೊಣಕಾಲಿಗೆ ಬಡಿದಿತ್ತು. ತೀವ್ರ ನೋವಿನಿಂದ ಮೈದಾನದಲ್ಲೇ ನರಳಾಡಿದ ಪಂತ್‌ ಬಳಿಕ ಕುಂಟುತಾ ಮೈದಾನ ತೊರೆದಿದ್ದರು. ಬಳಿಕ ಧೃವ್‌ ಜುರೇಲ್‌ ಕೀಪಿಂಗ್‌ ನಡೆಸಿದ್ದರು.

356 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ಸದ್ಯ 2 ವಿಕೆಟ್‌ ಕಳೆದುಕೊಂಡು 200ರ ಗಡಿ ದಾಟಿದೆ. ಮೊದಲ ಇನಿಂಗ್ಸ್‌ನ ಶೂನ್ಯ ಶೂರರಾದ ವಿರಾಟ್‌ ಕೊಹ್ಲಿ ಮತ್ತು ಸರ್ಫರಾಜ್‌ ಖಾನ್‌ ಅರ್ಧಶತಕ ಬಾರಿಸಿ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಈ ಜೋಡಿ ಮೂರನೇ ವಿಕೆಟ್‌ಗೆ ಅಜೇಯ 100 ರನ್‌ಗಳ ಜತೆಯಾಟ ನಡೆಸಿದೆ.