ಬೆಂಗಳೂರು: ಮಳೆ ಭೀತಿ ಮಧ್ಯೆ ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ) ಮೊದಲ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಪಂದ್ಯ ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಭಾರತದ ಟೆಸ್ಟ್ ಸಾಧನೆಯ ಇಣುಕು ನೋಟ ಹೀಗಿದೆ.
ಬೆಂಗಳೂರಿನಲ್ಲಿ 1974ರಿಂದ ಇದುವರೆಗೆ ಆಯೋಜಿಸಿರುವ 24 ಟೆಸ್ಟ್ ಪಂದ್ಯಗಳಲ್ಲಿ ಭಾರತ 9 ಪಂದ್ಯಗಳಲ್ಲಿ ಗೆಲುವು ಕಂಡಿದೆ. 6 ಪಂದ್ಯದಲ್ಲಿ ಸೋಲು ಕಂಡಿದೆ. 9 ಟೆಸ್ಟ್ಗಳು ಡ್ರಾಗೊಂಡಿವೆ. ನ್ಯೂಜಿಲ್ಯಾಂಡ್ ವಿರುದ್ಧ ಇಲ್ಲಿ ಆಡಲಾಗಿರುವ ಮೂರು ಟೆಸ್ಟ್ಗಳಲ್ಲೂ ಭಾರತ ಗೆದ್ದು ಅಜೇಯ ದಾಖಲೆ ಹೊಂದಿದೆ. ಈ ಲೆಕ್ಕಾಚಾರದಲ್ಲಿ ಈ ಬಾರಿಯೂ ಗೆಲುವು ಭಾರತದ್ದೇ ಎನ್ನಲಡ್ಡಿಯಿಲ್ಲ.
1988ರಲ್ಲಿ ಮೊದಲ ಮುಖಾಮುಖಿ
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಬೆಂಗಳೂರಿನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದ್ದು1988ರಲ್ಲಿ(india vs new zealand 1988 test series). ಈ ಪಂದ್ಯದಲ್ಲಿ ಭಾರತ 172 ರನ್ಗಳಿಂದ ಗೆದ್ದು ಬೀಗಿತ್ತು. ಭಾರತ ಪರ ಮೊದಲ ಇನಿಂಗ್ಸ್‌ನಲ್ಲಿ ನವಜೋತ್ ಸಿಂಗ್ ಸಿಧು(116) ಶತಕ ಬಾರಿಸಿ ಮಿಂಚಿದ್ದರು. ಕಿವೀಸ್ ಪರ ದಿಗ್ಗಜ ವೇಗಿ ರಿಚರ್ಡ್ ಹ್ಯಾಡ್ಲಿ 5 ವಿಕೆಟ್ ಉರುಳಿಸಿದ್ದರು.
ಉಭಯ ತಂಡಗಳು ದ್ವಿತೀಯ ಬಾರಿಗೆ ಚಿನ್ನಸ್ವಾಮಿಯಲ್ಲಿ ಎದುರಾದದ್ದು 1995ರಲ್ಲಿ. ಈ ಪಂದ್ಯವನ್ನು ಭಾರತ 8 ವಿಕೆಟ್ಗಳಿಂದ ಜಯಿಸಿತ್ತು. ಇತ್ತಂಡಗಳು ಇಲ್ಲಿ ಕೊನೆಯ ಬಾರಿಗೆ ಆಡಿದ್ದು 2012ರಲ್ಲಿ. ಭಾರತ, 5 ವಿಕೆಟ್ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ(103) ಮತ್ತು ಕಿವೀಸ್‌ನ ರಾಸ್ ಟೇಲರ್(113) ಶತಕ ಬಾರಿಸಿದ್ದರು. ವಿಶೇಷವೆಂದರೆ ಈಗಿನ ಕೋಚ್ ಆಗಿರುವ ಗೌತಮ್ ಗಂಭೀರ್ ಕೂಡ ಈ ಟೆಸ್ಟ್ ಆಡಿದ್ದರು. ಈಗ ಕೋಚ್ ಆಗಿದ್ದಾರೆ.
ಇದನ್ನೂ ಓದಿ IND vs NZ: ಮಳೆ ಭೀತಿ ಮಧ್ಯೆ ಮೊದಲ ಟೆಸ್ಟ್
ಎರಡೂವರೆ ವರ್ಷಗಳ ಬಳಿಕ ಟೆಸ್ಟ್
ಸುಮಾರು ಎರಡೂವರೆ ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಇದಾಗಿದೆ. 2022ರ ಮಾರ್ಚ್ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯದಾಗಿ ಭಾರತ ಇಲ್ಲಿ ಪಂದ್ಯವನ್ನಾಡಿತ್ತು. ನಾಯಕ ವಿರಾಟ್ ಕೊಹ್ಲಿ. ಪಂದ್ಯವನ್ನು 238 ರನ್ಗಳಿಂದ ಗೆಲುವು ಸಾಧಿಸಿತ್ತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುತ್ತಿರುವ 25 ಟೆಸ್ಟ್ ಪಂದ್ಯ ಇದಾಗಿದೆ. ಇದೇ ವೇಳೆ 25 ಅಥವಾ ಅದಕ್ಕಿಂತ ಹೆಚ್ಚು ಭಾರತದ ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ದೇಶದ 5ನೇ ಕ್ರಿಕೆಟ್ ಮೈದಾನವಾಗಿ ಗುರುತಿಸಿಕೊಳ್ಳಲಿದೆ. ಅತಿ ಹೆಚ್ಚು ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಂಡ ಇದುವರೆಗಿನ ಸ್ಟೇಡಿಯಂಗಳೆಂದರೆ ಈಡನ್ ಗಾರ್ಡನ್ಸ್, ಕೋಲ್ಕತಾ (42), ಚಿದಂಬರಂ, ಚೆನ್ನೈ (35), ಅರುಣ್ ಜೇಟ್ಲಿ ಸ್ಟೇಡಿಯಂ, ನವದೆಹಲಿ (35), ವಾಂಖೆಡೆ, ಮುಂಬೈ (26).