ಬೆಂಗಳೂರು: ಮಳೆ ಅಡಚಣೆಯ ಮಧ್ಯೆಯೂ ಚಿನ್ನಸ್ವಾಮಿಯಲ್ಲಿ ರನ್ ಹೊಳೆ ಹರಿದ ಮೊದಲ ಟೆಸ್ಟ್(India vs New Zealand 1st Test) ಪಂದ್ಯದಲ್ಲಿ ನ್ಯೂಜಿಲ್ಯಾಂಡ್(IND vs NZ) ತಂಡ ಭಾರತಕ್ಕೆ 8 ವಿಕೆಟ್‌ಗಳ ಸೋಲುಣಿಸಿದೆ. ಈ ಗೆಲುವಿನ ಮೂಲಕ ನ್ಯೂಜಿಲ್ಯಾಂಡ್ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. 36 ವರ್ಷಗಳ ಬಳಿಕ ಭಾರತದಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡಿದೆ. ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್ ಭಾರತದಲ್ಲಿ 37 ಟೆಸ್ಟ್ ಪಂದ್ಯಗಳನ್ನು ಆಡಿ ಕೇವಲ 2 ಪಂದ್ಯಗಳನ್ನು ಮಾತ್ರ ಜಯಿಸಿತ್ತು. ಕೊನೆಯ ಬಾರಿಗೆ ಕಿವೀಸ್ ಭಾರತೀಯ ನೆಲದಲ್ಲಿ ಗೆಲುವು ಕಂಡಿದ್ದು 1988ರಲ್ಲಿ. ಇದೀಗ 36 ವರ್ಷಗಳ ಬಳಿಕ ಜಯಭೇರಿ ಬಾರಿಸಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಈ ಪಂದ್ಯದ ಮೊದಲ ದಿನ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ದ್ವಿತೀಯ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಕೇವಲ 46 ರನ್‌ಗೆ ಸರ್ವಪತನ ಕಂಡಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 402 ರನ್ ಬಾರಿಸಿ 356 ರನ್ ಮುನ್ನಡೆ ಸಾಧಿಸಿತು. ಇನಿಂಗ್ಸ್ ಸೋಲಿನ ಭೀತಿಯಲ್ಲಿದ್ದ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಿಟ್ಟ ಬ್ಯಾಟಿಂಗ್ ಹೋರಾಟ ನಡೆಸಿ 462 ರನ್ ಬಾರಿಸಿ 106 ರನ್ ಮುನ್ನಡೆ ಗಳಿಸಿತು.
ಇದನ್ನೂ ಓದಿ SAW vs NZW: ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ಕ್ಷಣಗಣನೆ
107 ರನ್ ಗೆಲುವಿನ ಗುರಿ ಪಡೆದ ಕಿವೀಸ್ ಅಂತಿಮ ದಿನದಾಟವಾದ ಭಾನುವಾರ ಖಾತೆ ತೆರೆಯುವ ಮುನ್ನವೇ ನಾಯಕ ಲ್ಯಾಥಂ(0) ವಿಕೆಟ್ ಕಳೆದುಕೊಂಡಿತು. ಆದರೆ, ರಚಿನ್ ರವಿಂದ್ರ ಮತ್ತು ವಿಲ್ ಯಂಗ್ ಜೋಡಿ ನಡೆಸಿದ ಜವಾಬ್ದಾರಿಯುತ ಆಟದ ನೆರವಿನಿಂದ 2 ವಿಕೆಟ್‌ಗೆ 107 ರನ್ ಬಾರಿಸಿ ತಂಡ ವಿಜಯ ಪತಾಕೆ ಹಾರಿಸಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 72 ರನ್ ಜತೆಯಾಟ ನಡೆಸಿತು. ವಿಲ್ ಯಂಗ್ 48 ರನ್ ಬಾರಿಸಿದರೆ, ರಚಿನ್ 39 ರನ್ ಬಾರಿಸಿದರು. ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರು. ಇತ್ತಂಡಗಳ ನಡುವಿನ ದ್ವಿತೀಯ ಪಂದ್ಯ ಅಕ್ಟೋಬರ್ 24ರಿಂದ ಪುಣೆಯಲ್ಲಿ ಆರಂಭಗೊಳ್ಳಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಕಾಯ್ದುಕೊಂಡಿದೆ.
ಅಜೇಯ ದಾಖಲೆ ಬ್ರೇಕ್
ಸುಮಾರು ಎರಡೂವರೆ ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯ ಇದಾಗಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಈ ಹಿಂದೆ ಇಲ್ಲಿ ಆಡಲಾಗಿದ್ದ ಮೂರು ಟೆಸ್ಟ್ಗಳಲ್ಲೂ ಭಾರತ ಗೆದ್ದು ಅಜೇಯ ದಾಖಲೆ ಹೊಂದಿತ್ತು. ಇದೀಗ ಸೋಲಿನೊಂದಿಗೆ ಗೆಲುವಿನ ಓಟ ಕೊನೆಗೊಂಡಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್-46( ರಿಷಭ್ ಪಂತ್ 20, ಮ್ಯಾಟ್ ಹೆನ್ರಿ 15 ಕ್ಕೆ5, ವಿಲಿಯಂ ಓರ್ಕೆ 22ಕ್ಕೆ 4). ದ್ವಿತೀಯ ಇನಿಂಗ್ಸ್ -462 (ಸರ್ಫರಾಜ್ ಖಾನ್ 150, ರಿಷಭ್ ಪಂತ್ 99, ವಿರಾಟ್ ಕೊಹ್ಲಿ 70, ರೋಹಿತ್ ಶರ್ಮ 52, ಮ್ಯಾಟ್ ಹೆನ್ರಿ 102 ಕ್ಕೆ 3, ವಿಲಿಯಂ ಓರ್ಕೆ 92 ಕ್ಕೆ 3). ನ್ಯೂಜಿಲ್ಯಾಂಡ್: ಮೊದಲ ಇನಿಂಗ್ಸ್-402 (ಡೆವೋನ್ ಕಾನ್ವೆ 91, ರಚಿನ್ ರವೀಂದ್ರ 134, ಟಿಮ್ ಸೌಥಿ 65. ಕುಲದೀಪ್ ಯಾದವ್ 99 ಕ್ಕೆ 3, ರವೀಂದ್ರ ಜಡೇಜಾ 72 ಕ್ಕೆ 3, ಮೊಹಮ್ಮದ್ ಸಿರಾಜ್ 84 ಕ್ಕೆ 2). ದ್ವಿತೀಯ ಇನಿಂಗ್ಸ್-2 ವಿಕೆಟ್‌ಗೆ 107( ವಿಲ್ ಯಂಗ್ 45* ರಚಿನ್ ರವೀಂದ್ರ 39*).