ಕರಾಚಿ: ಭಾರತದಲ್ಲೇ ಟೆಸ್ಟ್ ಭದ್ರಕೋಟೆಯನ್ನು ಭೇದಿಸಿ ಭಾರತಕ್ಕೆ ಸೋಲುಣಿಸಿದ ನ್ಯೂಜಿಲ್ಯಾಂಡ್(IND vs NZ) ತಂಡದ ಸಾಹಸವನ್ನು ಎಲ್ಲರು ಕೊಂಡಾಡುತ್ತಿದ್ದಾರೆ. ಮತ್ತೊಂದು ಕಡೆ ತವರಿನಲ್ಲೇ ವೈಟ್ ವಾಶ್ ಆದ ಭಾರತ ತಂಡದ ಪ್ರದರ್ಶನದ ಬಗ್ಗೆ ಮಾಜಿ ಆಟಗಾರರು ಟೀಕೆಗಳ ಸುರಿಮಳೆ ಗೈದಿದ್ದಾರೆ. ಇದರ ಮಧ್ಯೆ ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಮ್(Wasim Akram) ಕೂಡ ಟೀಮ್ ಇಂಡಿಯಾದ(Team India) ಸೋಲನ್ನು ಲೇವಡಿ ಮಾಡಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ತಂಡ ಸ್ಪಿನ್ನರ್‌ಗಳಾದ ನೋಮನ್ ಅಲಿ ಮತ್ತು ಸಾಜಿದ್ ಖಾನ್ ಘಾತಕ ಬೌಲಿಂಗ್ ದಾಳಿ ಮೂಲಕ ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ಕಟ್ಟಿ ಹಾಕಿತ್ತು. ಭಾರತ ಸೋಲಿನ ಬಳಿಕ ಮಾತನಾಡಿದ ಅಕ್ರಮ್, ಭಾರತ ತಂಡವನ್ನು ಸ್ಪಿನ್ ಟ್ರ್ಯಾಕ್‌ನಲ್ಲಿ ಪಾಕಿಸ್ತಾನ ಕೂಡ ಸೋಲಿಸಬಲ್ಲದು ಎಂದು ಹೇಳಿದ್ದಾರೆ. ಜತೆಗೆ ಸ್ಪಿನ್ ಮಾಡುವ ನೆರೆಹೊರೆಯವರ ವಿರುದ್ಧ ಹೆಚ್ಚಿನ ಸರಣಿ ಆಡಿದರೆ ಭಾರತಕ್ಕೆ ಅನುಕೂಲವಾಗುತ್ತದೆ ಎಂದು ಹೇಳುವ ಮೂಲಕ ಭಾರತ, ಪಾಕ್ ಜತೆ ಕ್ರಿಕೆಟ್ ಆಡಬೇಕು ಎಂದು ಪರೋಕ್ಷವಾಗಿ ಬಾಣ ಬಿಟ್ಟಿದ್ದಾರೆ.
ಇದನ್ನೂ ಓದಿ IPL 2025 Mega Auction: ರಿಯಾದ್‌ನಲ್ಲಿ ಮೆಗಾ ಹರಾಜು; ದಿನಾಂಕ ಬಹಿರಂಗ
ಮತೋರ್ವ ಪಾಕ್ ಮಾಜಿ ಆಟಗಾರ ಬಸಿತ್ ಅಲಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರು ನಿರ್ಣಾಯಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ದೇಶೀಯ ಕ್ರಿಕೆಟ್ ಆಡುವ ಅಗತ್ಯ ಇದೆ. ವಿಶ್ವ ಕಂಡ ಶ್ರೇಷ್ಠ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಸೇರಿ ಹಲವು ಆಟಗಾರರು ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಾಗ ಯಾವುದೇ ಹಿಂಜರಿಕೆ ಇಲ್ಲದೆ ದೇಶೀಯ ಕ್ರಿಕೆಟ್ ಆಡಿ ಕಮ್‌ಬ್ಯಾಕ್ ಮಾಡುತ್ತಿದ್ದರು. ಇದೀಗ ರೋಹಿತ್ ಮತ್ತು ಕೊಹ್ಲಿ ಕೂಡ ಇದೇ ರೀತಿ ದೇಶೀಯ ಕ್ರಿಕೆಟ್ ಆಡಬೇಕು ಎಂದು ಸಲಹೆ ನೀಡಿದ್ದಾರೆ.
ಮುಂಬೈಯಲ್ಲಿ ನಡೆದಿದ್ದ ಅಂತಿಮ ಪಂದ್ಯದಲ್ಲಿ 147 ರನ್‌ಗಳ ಸಣ್ಣ ಮೊತ್ತವನ್ನು ಗಳಿಸಲಾಗದೆ ಭಾರತ ತಂಡ 25 ರನ್ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನಿಂದ ತವರಿನಲ್ಲಿ 91 ವರ್ಷಗಳಿಂದ ಟೆಸ್ಟ್ ಆಡುತ್ತಿರುವ ಭಾರತ ಮೊದಲ ಬಾರಿಗೆ 0-3 ಅಂತರದಲ್ಲಿ ಸರಣಿ ಸೋಲು ಅನುಭವಿಸಿದ ಅವಮಾನ ಎದುರಿಸಿತ್ತು.
ಸೋಲಿನ ಬಳಿಕ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ‘ತವರಿನಲ್ಲೇ 0-3 ಅಂತರದ ಸೋಲು ಜೀರ್ಣಿಸಲು ಕಷ್ಟ. ಸಿದ್ಧತೆಯ ಕೊರತೆಯೇ, ಕೆಟ್ಟ ಹೊಡೆತಗಳ ಆಯ್ಕೆಯೇ ಅಥವಾ ಮ್ಯಾಚ್ ಪ್ರ್ಯಾಕ್ಟೀಸ್ ಕೊರತೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆʼ ಎಂದು ಬರೆದಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ರೆಡ್ಬಾಲ್ ಕ್ರಿಕೆಟ್ ಪಂದ್ಯಗಳನ್ನು ಆಡದಿರುವುದೇ ಭಾರತ ತಂಡದ ವೈಫಲ್ಯಕ್ಕೆ ಕಾರಣ ಎಂದು ಮಾಜಿ ವೇಗಿ ಇರ್ಫಾನ್ ಪಠಾಣ್ ದೂರಿದ್ದಾರೆ. ಭಾರತ ತವರಿನಲ್ಲಿ ತೋರಿದ ಅತ್ಯಂತ ಮುಜುಗರದ ನಿರ್ವಹಣೆ ಇದಾಗಿದೆ ಎಂದು ಹೇಳಿದ್ದಾರೆ.