ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ(Bengaluru) ಸತತ ಮಳೆಯಾಗುತ್ತಿದೆ. ಹೀಗಾಗಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್(IND vs NZ) ಮೊದಲ ಟೆಸ್ಟ್(India vs New Zealand 1st Test) ಪಂದ್ಯದ ಮೊದಲ ದಿನದಾಟ ನಡೆಯುವುದು ಅನುಮಾನ. ಸದ್ಯ ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆಯಾಗುತ್ತಿದ್ದು ಮೋಡ ಕವಿದ ವಾತಾವರಣ ಕಂಡು ಬಂದಿದೆ. ಮಳೆ ನಿಂತರೂ ಮಂದ ಬೆಳಕು ಅಡ್ಡಿಯಾಗಬಹುದು. ಸದ್ಯ ಮೈದಾನಕ್ಕೆ ಕವರ್‌ಗಳನ್ನು ಹೊದಿಸಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನ ಡ್ರೈನೇಜ್ ವ್ಯವಸ್ಥೆ ಅತ್ಯುತ್ತಮ ಮಟ್ಟದಿಂದ ಕೂಡಿದ್ದರೂ ಕೂಡ ಮಳೆ ನಿಲ್ಲದೆ ಹೋದರೆ ಪಂದ್ಯ ಅಸಾಧ್ಯ. ಮಳೆ ಸಂಪೂರ್ಣ ನಿಂತರೆ, ಆಗ ಕೆಲವೇ ನಿಮಿಷಗಳಲ್ಲಿ ಅಂಗಳವನ್ನು ಪಂದ್ಯಕ್ಕೆ ಸಜ್ಜುಗೊಳಿಸಬಹುದು.
ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರಿನಲ್ಲಿ ಇಂದು (ಅ. 16) ಮತ್ತು ನಾಳೆ (ಅ.17)ಯೂ ಭಾರೀ ಮಳೆಯಾಗಲಿದೆ. ಪಂದ್ಯದ 3ನೇ ದಿನ ಮಳೆಯ ಸಾಧ್ಯತೆ ಕಡಿಮೆಯಾಗುವ ನಿರೀಕ್ಷೆ ಇದೆ. ಬಹುಶಃ ಪಂದ್ಯ ಕೂಡ ಅಂದೇ ಆರಂಭವಾದೀತೆಂಬುದು ಸದ್ಯದ ನಿರೀಕ್ಷೆ. ಮಂಗಳವಾರದ ಭಾರೀ ಮಳೆಯಿಂದಾಗಿ ಎರಡೂ ತಂಡಗಳಿಗೆ ಅಭ್ಯಾಸ ನಡೆಸಲಾಗಲಿಲ್ಲ. ಮೂರನೇ ದಿನ ಪಂದ್ಯ ಆರಂಭವಾದರೆ ಭಾರತ ಕಾನ್ಪುರದಲ್ಲಿ ಆಡಿದ ಆಕ್ರಮಣಕಾರಿ ಆಟವನ್ನು ಚಿನ್ನಸ್ವಾಮಿಯಲ್ಲಿ ನೋಡಬಹುದು. ಬ್ಯಾಟಿಂಗ್ ಟ್ರ್ಯಾಕ್ ಆಗಿರುವ ಕಾರಣ ರನ್ ಮಳೆ ಹರಿಯುವುದು ಖಚಿತ.
ಬೆಂಗಳೂರಿನಲ್ಲಿ 1974ರಿಂದ ಇದುವರೆಗೆ ಆಯೋಜಿಸಿರುವ 24 ಟೆಸ್ಟ್ ಪಂದ್ಯಗಳಲ್ಲಿ ಭಾರತ 9 ಪಂದ್ಯಗಳಲ್ಲಿ ಗೆಲುವು ಕಂಡಿದೆ. 6 ಪಂದ್ಯದಲ್ಲಿ ಸೋಲು ಕಂಡಿದೆ. 9 ಟೆಸ್ಟ್ಗಳು ಡ್ರಾಗೊಂಡಿವೆ. ನ್ಯೂಜಿಲ್ಯಾಂಡ್ ವಿರುದ್ಧ ಇಲ್ಲಿ ಆಡಲಾಗಿರುವ ಮೂರು ಟೆಸ್ಟ್ಗಳಲ್ಲೂ ಭಾರತ ಗೆದ್ದು ಅಜೇಯ ದಾಖಲೆ ಹೊಂದಿದೆ. ಈ ಲೆಕ್ಕಾಚಾರದಲ್ಲಿ ಈ ಬಾರಿಯೂ ಗೆಲುವು ಭಾರತದ್ದೇ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ IND vs NZ: ಬೆಂಗಳೂರಿನ ಬಗ್ಗೆ ಕಿವೀಸ್ ಆಟಗಾರನ ಮನದಾಳದ ಮಾತು
ಎರಡೂವರೆ ವರ್ಷಗಳ ಬಳಿಕ ಟೆಸ್ಟ್
ಸುಮಾರು ಎರಡೂವರೆ ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಇದಾಗಿದೆ. 2022ರ ಮಾರ್ಚ್ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯದಾಗಿ ಭಾರತ ಇಲ್ಲಿ ಪಂದ್ಯವನ್ನಾಡಿತ್ತು. ನಾಯಕ ವಿರಾಟ್ ಕೊಹ್ಲಿ. ಪಂದ್ಯವನ್ನು 238 ರನ್ಗಳಿಂದ ಗೆಲುವು ಸಾಧಿಸಿತ್ತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುತ್ತಿರುವ 25 ಟೆಸ್ಟ್ ಪಂದ್ಯ ಇದಾಗಿದೆ. ಇದೇ ವೇಳೆ 25 ಅಥವಾ ಅದಕ್ಕಿಂತ ಹೆಚ್ಚು ಭಾರತದ ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ದೇಶದ 5ನೇ ಕ್ರಿಕೆಟ್ ಮೈದಾನವಾಗಿ ಗುರುತಿಸಿಕೊಳ್ಳಲಿದೆ. ಅತಿ ಹೆಚ್ಚು ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಂಡ ಇದುವರೆಗಿನ ಸ್ಟೇಡಿಯಂಗಳೆಂದರೆ ಈಡನ್ ಗಾರ್ಡನ್ಸ್, ಕೋಲ್ಕತಾ (42), ಚಿದಂಬರಂ, ಚೆನ್ನೈ (35), ಅರುಣ್ ಜೇಟ್ಲಿ ಸ್ಟೇಡಿಯಂ, ನವದೆಹಲಿ (35), ವಾಂಖೆಡೆ, ಮುಂಬೈ (26).