ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M.Chinnaswamy Stadium) ನಾಳೆ(ಬುಧವಾರ)ಯಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ) ನಡುವಣ ಟೆಸ್ಟ್ ಪಂದ್ಯ ತನ್ನ ಪಾಲಿಗೆ ಸ್ಮರಣೀಯ ಎಂದು ಕರ್ನಾಟಕ ಮೂಲದ ನ್ಯೂಜಿಲ್ಯಾಂಡ್ ಆಟಗಾರ ರಚಿನ್ ರವೀಂದ್ರ(Rachin Ravindra) ಹೇಳಿದ್ದಾರೆ.
ಪಂದ್ಯಕ್ಕೂ ಮುನ್ನ ಬೆಂಗಳೂರಿನ ಬಗ್ಗೆ ಮನ ಬಿಚ್ಚಿ ಮಾತನಾಡಿದ ರಚಿನ್, ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಭಾರತೀಯ ಮೂಲದವನು ಎನ್ನುವ ಬಗ್ಗೆಯೂ ನನಗೆ ತುಂಬಾ ಹೆಮ್ಮೆ ಇದೆ. ಬೆಂಗಳೂರು ನನ್ನ ಕುಟುಂಬಸ್ಥರು ನೆಲೆಸಿರುವ ಸ್ಥಳ. ಇಲ್ಲಿ ಆಡಲು ಸಾಧ್ಯವಾಗುವುದು ನನ್ನ ಪಾಲಿಗೆ ವಿಶೇಷ ಕ್ಷಣ. ನಾನು ಬೆಂಗಳೂರಿನಲ್ಲಿ ಆಡುವುದನ್ನು ನನ್ನ ತಂದೆ ಸ್ಟೇಡಿಯಂನಲ್ಲಿ ಕೂತು ನೋಡಲಿದ್ದಾರೆ. ನನ್ನ ತಂದೆಯ ಸಂಬಂಧಿಕರು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇವರ ಬೆಂಬಲ ಕೂಡ ನನನಗೆ ಲಭಿಸಲಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯವು ನನ್ನ ಪಾಲಿಗೆ ಸ್ಮರಣೀಯ ಎಂದು ರಚಿನ್ ರವೀಂದ್ರ ಹೇಳಿದ್ದಾರೆ.
ಯಾರು ಈ ರಚಿನ್ ರವೀಂದ್ರ?
ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಸಿಸ್ಟಂ ಆರ್ಕಿಟೆಕ್ಟ್ ಆಗಿದ್ದರು. ಅವರ ಅಜ್ಜ ಬಾಲಕೃಷ್ಣ ಅಡಿಗ ಅವರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದರು. ರವಿ ಕೃಷ್ಣಮೂರ್ತಿ ಸ್ಥಳೀಯ ಹಂತದ ಕ್ರಿಕೆಟ್ ಆಡಿ ಬಳಿಕ ನ್ಯೂಜಿಲ್ಯಾಂಡ್ಗೆ ಕೆಲಸದ ನಿಮಿತ್ತ ವಲಸೆ ಹೋಗಿದ್ದರು. ಕೃಷ್ಣಮೂರ್ತಿ ಅವರು ಸಚಿನ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಇಬ್ಬರೂ ಆಟಗಾರರ ಹೆಸರಿನ ಅಕ್ಷರಗಳನ್ನು ಸಂಯೋಜಿಸುವ ಮೂಲಕ ತಮ್ಮ ಮಗನಿಗೆ ಹೆಸರಿಟ್ಟಿದ್ದಾರೆ. ರಾಹುಲ್ ಅವರಿಂದ “ರಾ” ಮತ್ತು ಸಚಿನ್ ಅವರಿಂದ “ಚಿನ್” ತೆಗೆದುಕೊಂಡು ಎರಡನ್ನೂ ಸಂಯೋಜಿಸಿ ರಚಿನ್ ಎಂದು ಹೆಸರಿಟ್ಟರು.
ಇದನ್ನೂ ಓದಿ IND vs NZ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ಟೆಸ್ಟ್ ಸಾಧನೆ ಹೇಗಿದೆ?
16 ವರ್ಷದವರಾಗಿದ್ದಾಗಲೇ ರಚಿನ್ ಅವರು ಕಿವೀಸ್ನ 19 ವರ್ಷದೊಳಗಿನ ತಂಡದಲ್ಲಿ ಆಡಲು ಆರಂಭಿಸಿದ್ದ ಬಳಿಕ ಹಂತ ಹಂತವಾಗಿ ಬೆಳೆದು ರಾಷ್ಟ್ರೀಯ ತಂಡವನ್ನು ಸೇರಿಕೊಂಡರು. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅಲ್ಲದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಯನ್ನು ಕೂಡ ಮುರಿದಿದ್ದರು.
ಕಿವೀಸ್ ಪರ ರಚಿನ್ 9 ಟೆಸ್ಟ್ ಪಂದ್ಯಗಳನ್ನಾಡಿ 1 ದ್ವಿಶತಕ ಹಾಗೂ 1 ಶತಕದೊಂದಿಗೆ ಒಟ್ಟು 672 ರನ್ ಕಲೆಹಾಕಿದ್ದಾರೆ. ಹಾಗೆಯೇ 25 ಏಕದಿನ ಪಂದ್ಯಗಳಿಂದ 3 ಶತಕಗಳೊಂದಿಗೆ 820 ರನ್ಗಳಿಸಿದ್ದಾರೆ. ಇನ್ನು 23 ಟಿ20 ಪಂದ್ಯಗಳಿಂದ 231 ರನ್ ಕಲೆಹಾಕಿದ್ದಾರೆ. ಬೌಲಿಂಗ್ ಆಲ್‌ರೌಂಡರ್ ಆಗಿರುವ ಅವರು ಒಟ್ಟು 41 ವಿಕೆಟ್ಗಳನ್ನು ಕಿತ್ತಿದ್ದಾರೆ.