Thursday, 12th December 2024

IND vs NZ: ಶತಕ ಬಾರಿಸಿ ದಾಖಲೆ ಬರೆದ ರಚಿನ್ ರವೀಂದ್ರ

ಬೆಂಗಳೂರು: ಭಾರತ(IND vs NZ) ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಶತಕ ಬಾರಿಸಿದ ಕನ್ನಡಿಗ, ನ್ಯೂಜಿಲ್ಯಾಂಡ್‌ನ ರಚಿನ್ ರವೀಂದ್ರ(Rachin Ravindra) ದಾಖಲೆಯೊಂದನ್ನು ಬರೆದಿದ್ದಾರೆ. 2012 ರ ನಂತರ ಭಾರತದಲ್ಲಿ ಶತಕ ಬಾರಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಗುರುವಾರ 3 ವಿಕೆಟ್‌ಗೆ 180 ರನ್‌ ಕಲೆ ಹಾಕಿದ್ದ ನ್ಯೂಜಿಲ್ಯಾಂಡ್‌ ಮೂರನೇ ದಿನದಾಟವಾದ ಶುಕ್ರವಾರ ಬಿರುಸಿನ ಬ್ಯಾಟಿಂಗ್‌ ನಡೆಸಿ 402 ರನ್‌ ಬಾರಿಸಿ 356 ರನ್‌ಗಳ ಮುನ್ನಡೆ ಸಾಧಿಸಿತು. 22 ರನ್‌ ಗಳಿಸಿದ್ದ ಆಲ್ರೌಂಡರ್ ರಚಿನ್ ರವೀಂದ್ರ ಬಿರುಸಿನ ಬ್ಯಾಟಿಂಗ್‌ ಮೂಲಕ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ದ್ವಿತೀಯ ಟೆಸ್ಟ್‌ ಶತಕ. 123 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ ರಚಿನ್‌ ಅಂತಿಮವಾಗಿ 157 ಎಸೆತಗಳಿಂದ 13 ಬೌಂಡರಿ ಮತ್ತು 4 ಸಿಕ್ಸರ್‌ ಬಾರಿಸಿ 134 ರನ್‌ ಗಳಿಸಿದರು.

ಶತಕ ಬಾರಿಸುವ ಮೂಲಕ ರಾಸ್‌ ಟೇಲರ್‌ ಬಳಿಕ 2012 ರ ನಂತರ ಭಾರತದಲ್ಲಿ ಶತಕ ಬಾರಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟರ್ ಎಂಬ ದಾಖಲೆ ಬರೆದರು. ಸಾರಸ್ಯವೆಂದರೆ ರಾಸ್‌ ಟೇಲರ್‌ ಕೂಡ ಬೆಂಗಳೂರು ಟೆಸ್ಟ್‌ನಲ್ಲಿಯೇ ಶತಕ ಬಾರಿಸಿದ್ದು. ಅಂದು ಟೇಲರ್‌ 113 ರನ್‌ ಬಾರಿಸಿದ್ದರು. ಪಂದ್ಯವನ್ನು ಭಾರತ 5 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು.

ಇದನ್ನೂ ಓದಿ IND vs NZ: ಭಾರತ ತಂಡವನ್ನು ಗೇಲಿ ಮಾಡಿದ ಮೈಕಲ್‌ ವಾನ್‌

ಮೂರನೇ ದಿನದಾಟದಲ್ಲಿ ರಚಿನ್‌ ಜತೆ ಟಿಮ್‌ ಸೌಥಿ ಕೂಡ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದರು. ಸಿರಾಜ್‌ಗೆ ಸಿಕ್ಸರ್‌ ಮತ್ತು ಬೌಂಡರಿಗಳ ರುಚಿ ತೋರಿಸಿದ ಸೌಥಿ 4 ಸೊಗಸಾದ ಸಿಕ್ಸರ್‌ ಮತ್ತು 5 ಬೌಂಡರಿ ಸಹಾಯದಿಂದ 65 ರನ್‌ ಬಾರಿಸಿದರು. ಈ ಜೋಡಿ 8ನೇ ವಿಕೆಟ್‌ಗೆ ಅತ್ಯಮೂಲ್ಯ 137 ರನ್‌ ಜತೆಯಾಟ ನಡೆಸಿದರು. ಮೊದಲ ಇನಿಂಗ್ಸ್‌ನ ಭಾರೀ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಭಾರತ ಸದ್ಯ ಉತ್ತಮ ರನ್‌ ಗಳಿಕೆಯ ಮೂಲಕ ತಿರುಗೇಟು ನೀಡುತ್ತಿದೆ. ಭಾರತ ಪರ ಕುಲದೀಪ್‌ ಯಾದವ್‌(99 ಕ್ಕೆ3) ಮತ್ತು ರವೀಂದ್ರ ಜಡೇಜಾ(72ಕ್ಕೆ 3) ವಿಕೆಟ್‌ ಕಿತ್ತರು. ಸಿರಾಜ್‌ 2 ವಿಕೆಟ್‌ ಪಡೆದರೆ, ಬುಮ್ರಾ ಮತ್ತು ಅಶ್ವಿನ್‌ ತಲಾ ಒಂದು ವಿಕೆಟ್‌ ಉರುಳಿಸಿದರು.