ಬೆಂಗಳೂರು: ಬಾಂಗ್ಲಾದೇಶ(IND vs NZ) ವಿರುದ್ಧದ ತವರಿನ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಜೋಶ್ನಲ್ಲಿರುವ ಭಾರತ ತಂಡ ಇದೀಗ ಮತ್ತೊಂದು ತವರಿನ ಟೆಸ್ಟ್ ಸರಣಿಯನ್ನಾಡಲು ರೆಡಿಯಾಗಿದೆ. ಎದುರಾಳಿ ಬಲಿಷ್ಠ ನ್ಯೂಜಿಲ್ಯಾಂಡ್. ಇತ್ತಂಡಗಳ ಸರಣಿಯ ಮೊದಲ ಪಂದ್ಯ ನಾಳೆ(ಅ.16, ಬುಧವಾರ)ಯಿಂದ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಎಂ. ಚಿನ್ನಸ್ವಾಮಿ(M. Chinnaswamy) ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ. ಪಂದ್ಯಕ್ಕೆ ಮಳೆ ಭೀತಿಯೂ ಎದುರಾಗಿದೆ(rain-threat in Bengaluru).
ರೋಹಿತ್-ಕೊಹ್ಲಿ ಬ್ಯಾಟಿಂಗ್ ಚಿಂತೆ
ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಕಳೆದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದ್ದರು. ಹೀಗಾಗಿ ಇವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಸದ್ಯ ಯಾವುದೇ ಚಿಂತೆಯಿಲ್ಲ. ಚಿಂತೆ ಇರುವುದು ಅನುಭವಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವುದು. ವರ್ಷಾಂತ್ಯದಲ್ಲಿ ಆಸ್ಟ್ರೆಲಿಯಾ ಪ್ರವಾಸ, ಮುಂದಿನ ವರ್ಷ ನಡೆಯುವ ಟೆಸ್ಟ್ ವಿಶ್ವಕಪ್ಗೂ ಮುನ್ನ ಉಭಯ ಆಟಗಾರರು ಬ್ಯಾಟಿಂಗ್ ಲಯಕ್ಕೆ ಮರಳುವ ಅಗತ್ಯವಿದೆ. ಬುಧವಾರ ಬೆಳಗ್ಗೆ ಟಾಸ್ ಸಮಯದವರೆಗೂ ಭಾರತದ ಆಡುವ 11ರ ಬಳಗದ ಬಗ್ಗೆ ಗೊಂದಲ ಮುಂದುವರಿಯಲಿದೆ. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಮತ್ತು ಸರ್ಫರಾಜ್ ಮಧ್ಯೆ ಪೈಪೋಟಿ ಇದೆ. ಸರ್ಫರಾಜ್ ಇರಾನಿ ಕಪ್ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ IND vs NZ: ಕಿವೀಸ್ಗೆ ಆಘಾತ; ಸರಣಿಯಿಂದ ಹೊರಬಿದ್ದ ಪ್ರಮುಖ ವೇಗಿ
ಭಾರತದ್ದು ತ್ರಿವಳಿ ವೇಗಿ, ಅವಳಿ ಸ್ಪಿನ್ ಕಾಂಬಿನೇಶನ್
ಸ್ಪಿನ್ ಬೌಲಿಂಗ್ ಆಲ್ರೌಂಡರ್ ಜಡೇಜ ಸೇರಿದಂತೆ 5 ಮಂದಿ ಸ್ಪೆಷಲಿಸ್ಟ್ ಬೌಲರ್ಗಳನ್ನು ಭಾರತ ಕಣಕ್ಕಿಳಿಸಲಿದೆ. ಇದು ತ್ರಿವಳಿ ವೇಗಿ, ಅವಳಿ ಸ್ಪಿನ್ ಕಾಂಬಿನೇಶನ್ ಆಗಿರಲಿದೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನಂತೆ ಮತ್ತೆ ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಆಕಾಶ್ದೀಪ್ರನ್ನು ಬೆಂಗಳೂರಿನಲ್ಲೂ ಕಣಕ್ಕಿಳಿಸುವ ಲೆಕ್ಕಾಚಾರವಿದೆ. ಅಲ್ಲದೆ ಪಿಚ್ ಮೇಲಿನ ಸ್ವಲ್ಪ ಹಸಿರು ಹುಲ್ಲು ಮತ್ತು ಬೆಂಗಳೂರಿನ ಮೋಡಕವಿದ ವಾತಾವರಣ ಮತ್ತು ಮಳೆ ವೇಗದ ಬೌಲರ್ಗಳಿಗೆ ಅನುಕೂಲಕರವೆನಿಸಿದೆ. ಪ್ರಧಾನ ಸ್ಪಿನ್ನರ್ ಅಶ್ವಿನ್ ಮತ್ತು ಜಡೇಜಾ ಕಿವೀಸ್ ಸರದಿಗೆ ಕಂಟಕವಾದರೆ ಗೆಲುವು ನಮ್ಮದೆ.
ಕಿವೀಸ್ ತಂಡದಲ್ಲಿಯೂ ಅನುಭವಿ ಸ್ಪಿನ್ನರ್ ಆದ ಅಜಾಜ್ ಪಟೇಲ್ ಈ ಬಾರಿಯೂ ಭಾರತಕ್ಕೆ ಸವಾಲೆಸೆಯುವ ಸಾಧ್ಯತೆ ಇದೆ. ಕಳೆದ 2021ರ ಪ್ರವಾಸದಲ್ಲಿ ಮುಂಬೈಯಲ್ಲಿ ನಡೆದಿದ್ದ ಟೆಸ್ಟ್ನಲ್ಲಿ ಅವರು ಬರೋಬ್ಬರಿ 47.5 ಓವರ್ ಎಸೆದೆ ಎಲ್ಲಾ ಹತ್ತೂ ವಿಕೆಟ್ ಕಿತ್ತು ಮಿಂಚಿದ್ದರು. ಹೀಗಾಗಿ ಈ ಬಾರಿಯೂ ಇವರ ಮೇಲೆ ಕಿವೀಸ್ ಹೆಚ್ಚಿನ ನಂಬಿಕೆ ಇರಿಸಿದೆ. ಮತ್ತೊಂದೆಡೆ ಬೆಂಗಳೂರು ಮೂಲದ ರಚಿನ್ ರವೀಂದ್ರ ಕೂಡ ತಂಡದಲ್ಲಿದ್ದಾರೆ. ಐಪಿಎಲ್ನಲ್ಲಿ ಭಾರತದ ಪಿಚ್ನಲ್ಲಿ ಆಡಿದ ಅನುಭವ ಅವರಿಗಿದೆ. ಮಿಚೆಲ್ ಸ್ಯಾಂಟ್ನರ್ ಪ್ರಧಾನ ಸ್ಪಿನ್ನರ್ ಆಗಿರಲಿದ್ದಾರೆ. ವೇಗಿಗಳಾಗಿ ಮ್ಯಾಟ್ ಹೆನ್ರಿ ಮತ್ತು ಟಿಮ್ ಸೌಥಿ ಕಾಣಿಸಿಕೊಂಡಿದ್ದಾರೆ.