Sunday, 24th November 2024

IND vs NZ Test: ಬೆಂಗಳೂರು ಟೆಸ್ಟ್‌ಗೂ ಮಳೆ ಭೀತಿ; 5 ದಿನದ ಆಟ ಅಸಾಧ್ಯ!

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಾಳೆಯಿಂದ (ಬುಧವಾರ,ಅ. 16) ಆರಂಭಗೊಳ್ಳಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್‌(IND vs NZ Test) ನಡುವಣ ಮೊದಲ ಟೆಸ್ಟ್‌ ಪಂದ್ಯಕ್ಕೆ ಮಳೆ ಭೀತಿ(rain threat) ಎದುರಾಗಿದೆ. ಮಂಗಳವಾರವೇ ಬೆಂಗಳೂರಿನಲ್ಲಿ(Bengaluru weather forecast) ಮಳೆ ಆರ್ಭಟ ಹೆಚ್ಚಾಗಿದ್ದು ಮುಂದಿನ ಮೂರು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಕಾನ್ಪುರದಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯ ಕೂಡ ಮಳೆಯಿಂದ ಕೇವಲ 2ವರೆ ದಿನ ಮಾತ್ರ ಸಾಗಿತ್ತು. ಇದೀಗ ಕಿವೀಸ್‌ ವಿರುದ್ಧದ ಮೊದಲ ಟೆಸ್ಟ್‌ ಕೂಡ ಸಂಪೂರ್ಣವಾಗಿ 5 ದಿನಗಳ ಆಟ ನಡೆಯುವುದು ಅನುಮಾನ ಎನ್ನುವಂತಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಿಗೆ ಮಳೆಯಾಗಬಹುದು ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಅಕ್ಟೋಬರ್‌ 15ರಿಂದ 19ರವರೆಗೆ ಮಳೆ ತಪ್ಪಿದ್ದಲ್ಲ ಎಂದು ಹೇಳಲಾಗಿದೆ. ಹೀಗಾದರೆ ಪಂದ್ಯ ನಡೆಯುವುದು ಅನುಮಾನ. ಇದು ಚಿನ್ನಸ್ವಾಮಿಯಲ್ಲಿ ನಡೆಯುವ 25ನೇ ಟೆಸ್ಟ್‌ ಪಂದ್ಯವಾಗಿದೆ. ಮಳೆಯಿಂದ ಪಂದ್ಯ ರದ್ದಾದರೆ ಈ ಆತಿಥ್ಯ ಕೈ ತಪ್ಪಲಿದೆ. ಮಂಗಳವಾರ ಆಟಗಾರರು ಹೊರಾಂಗಣ ಅಭ್ಯಾಸ ಕೂಡ ಮೊಟಕುಗೊಳಿಸಿದ್ದಾರೆ. ಸೋಮವಾರ ಕಠಿಣ ಅಭ್ಯಾಸ ನಡೆಸಿದ್ದರು.

ಇದನ್ನೂ ಓದಿ IND vs NZ: ಕಿವೀಸ್‌ ವಿರುದ್ಧವೂ ಆಕ್ರಮಣಕಾರಿ ಆಟ; ಸುಳಿವು ನೀಡಿದ ಗಂಭೀರ್

ಸಬ್‌ ಏರ್‌ ಸಿಸ್ಟಮ್‌

ಎಷ್ಟೇ ಮಳೆಯಾದರೂ ಕೂಡ ಮೈದಾನ ಒದ್ದೆಯಾಗಿದೆ ಎಂದು ದಿನದಾಟವನ್ನು ರದ್ದು ಮಾಡುವ ಸಂಕಷ್ಟ ಇಲ್ಲಿ ಎದುರಾಗದು. ಹೌದು ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್‌ ಏರ್‌ ಸಿಸ್ಟಮ್‌(SubAir facility) ತಂತ್ರಜ್ಞಾನ(SubAir facility Chinnaswamy) ಈ ಮೈದಾನದಲ್ಲಿದೆ. ಹೀಗಾಗಿ ಮಳೆ ಬಂದು ನಿಂತ ಬಳಿಕ ಪಂದ್ಯ ನಡೆಯುವುದು ಖಚಿತ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ. ಸತತವಾಗಿ ಮಳೆ ಸುರಿದರೆ ಮಾತ್ರ ಪಂದ್ಯ ರದ್ದಾಗುತ್ತದೆ.

ಸಬ್‌ ಏರ್‌ ಸಿಸ್ಟಮ್‌ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದ ಗಾಲ್ಫ್ ಸ್ಟೇಡಿಯಂಗಳಲ್ಲಿ ಮಾತ್ರ ಇಂತಹ ಅತ್ಯಾಧುನಿಕ ವ್ಯವಸ್ಥೆ ಇದೆ.