Sunday, 24th November 2024

IND vs NZ Test: ದಾಖಲೆಯ ಹೊಸ್ತಿಲಲ್ಲಿ ಭಾರತ-ಕಿವೀಸ್‌ ಟೆಸ್ಟ್‌ ಸರಣಿ

ಬೆಂಗಳೂರು: ಪ್ರವಾಸಿ ನ್ಯೂಜಿಲ್ಯಾಂಡ್‌(IND vs NZ Test) ಮತ್ತು ಆತಿಥೇಯ ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿ ನಾಳೆಯಿಂದ ಆರಂಭವಾಗಲಿದೆ. ಈ ಸರಣಿ ಅನೇಕ ದಾಖಲೆಗಳನ್ನು ತೆರೆದಿಡಲು ಸಜ್ಜಾಗಿದೆ. ಉಭಯ ತಂಡಗಳ ಆಟಗಾರರಿಗೂ ವೈಯಕ್ತಿಕ ಸಾಧನೆ ಮಾಡುವ ಸುವರ್ಣಾವಕಾಶವಾಗಿದೆ. ಹೀಗಾಗಿ ಈ ಸರಣಿ ಕುತೂಹಲ ಹುಟ್ಟಿಸಿದೆ. ಇಂಥ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

9 ಸಾವಿರ ರನ್‌ ಸನಿಹ ಕೊಹ್ಲಿ

ವಿರಾಟ್‌ ಕೊಹ್ಲಿ(Virat Kohli) ಕಿವೀಸ್‌ ಸರಣಿಯಲ್ಲಿ 53 ರನ್‌ ಬಾರಿಸಿದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಕ್ಲಬ್‌ ಸೇರಲಿದ್ದಾರೆ. ಆಗ ಅವರು 9 ಸಾವಿರ ರನ್‌ ಗಳಿಸಿದ ಭಾರತದ 4ನೇ ಕ್ರಿಕೆಟಿಗನಾಗಿ ಮೂಡಿಬರಲಿದ್ದಾರೆ. ಉಳಿದವರೆಂದರೆ ಸಚಿನ್‌ ತೆಂಡೂಲ್ಕರ್‌ (15,921), ರಾಹುಲ್‌ ದ್ರಾವಿಡ್‌ (13,265) ಮತ್ತು ಸುನೀಲ್‌ ಗಾವಸ್ಕರ್‌ (10,122). ಸದ್ಯ ಕೊಹ್ಲಿ 195 ಇನಿಂಗ್ಸ್‌ ಆಡಿ 8947* ರನ್‌ ಬಾರಿಸಿದ್ದಾರೆ.

9 ಸಾವಿರ ರನ್‌ ಗಡಿಯಲ್ಲಿ ವಿಲಿಯಮ್ಸನ್‌

ಗಾಯದ ಸಮಸ್ಯೆಯಿಂದ ಮೊದಲ ಪಂದ್ಯಕ್ಕೆ ಅಲಭ್ಯವಾಗಿರುವ ನ್ಯೂಜಿಲ್ಯಾಂಡ್‌ ತಂಡದ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ಗೂ ಈ ಸರಣಿಯಲ್ಲಿ119 ರನ್ ಬಾರಿಸಿದರೆ 9 ಸಾವಿರ ರನ್ ಪೂರ್ತಿಗೊಳಿಸಲಿದ್ದಾರೆ. ಆಗ ಅವರು ಈ ಮೈಲುಗಲ್ಲು ತಲುಪಿದ ನ್ಯೂಜಿಲ್ಯಾಂಡ್‌ನ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ವಿಲಿಯಮ್ಸನ್ ಈಗಾಗಲೇ ಟೆಸ್ಟ್‌ನಲ್ಲಿ8,881 ರನ್ ಬಾರಿಸಿದ್ದಾರೆ.

ಕುಂಬ್ಳೆ ದಾಖಲೆ ಮೇಲೆ ಕಣ್ಣಿಟ್ಟ ಅಶ್ವಿನ್‌

ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿನ್ ಅವರು ಈ ಟೆಸ್ಟ್‌ ಸರಣಿಯಲ್ಲಿ ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಬಾರಿ 10 ವಿಕೆಟ್ ಗೊಂಚಲು ಪಡೆದ ದಾಖಲೆ ನಿರ್ಮಿಸಲು ಇನ್ನೊಂದು 10 ವಿಕೆಟ್ ಗೊಂಚಲು ಅಗತ್ಯವಿದೆ. ಸದ್ಯ ಕುಂಬ್ಳೆ ಮತ್ತು ಅಶ್ವಿನ್‌ 8 ಬಾರಿ 10 ವಿಕೆಟ್ ಗೊಂಚಲು ಕಬಳಿಸಿ ಜಂಟಿ ದಾಖಲೆ ಹೊಂದಿದ್ದಾರೆ. ಅಶ್ವಿನ್‌ 10 ವಿಕೆಟ್ ಗೊಂಚಲು ಪಡೆದರೆ, ಹೆಚ್ಚು ಬಾರಿ 10 ವಿಕೆಟ್ ಗೊಂಚಲು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ರಿಚರ್ಡ್ ಹ್ಯಾಡ್ಲಿ ಹಾಗೂ ರಂಗನ ಹೆರಾತ್‌ ಅವರೊಂದಿಗೆ ಜಂಟಿ ಮೂರನೇ ಸ್ಥಾನ ಪಡೆಯಲಿದ್ದಾರೆ.

ಇದನ್ನೂ ಓದಿ IND vs NZ Test: ಬೆಂಗಳೂರು ಟೆಸ್ಟ್‌ಗೂ ಮಳೆ ಭೀತಿ; 5 ದಿನದ ಆಟ ಅಸಾಧ್ಯ!

300 ವಿಕೆಟ್ ನಿರೀಕ್ಷೆಯಲ್ಲಿ ಕುಲದೀಪ್

ಚೈನಾಮನ್‌ ಖ್ಯಾತಿಯ ಸ್ಪಿನ್ನರ್‌ ಕುಲದೀಪ್ ಯಾದವ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸಲು ಕೇವಲ ಆರು ವಿಕೆಟ್‌ಗಳ ಅಗತ್ಯವಿದೆ. ಕುಲ್‌ದೀಪ್‌ ಈ ವರೆಗೆ ಏಕದಿನದಲ್ಲಿ(172), ಟೆಸ್ಟ್‌ನಲ್ಲಿ (53) ಹಾಗೂ ಟಿ-20 ಕ್ರಿಕೆಟ್‌ನಲ್ಲಿ (69) ವಿಕೆಟ್‌ಗಳನ್ನು ಉರುಳಿಸಿದ್ದಾರೆ. 300 ವಿಕೆಟ್‌ ಪೂರ್ತಿಗೊಳಿಸಿದರೆ ಈ ಸಾಧನೆಗೈದ ಭಾರತದ 13ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.